ADVERTISEMENT

ಮೀಸಲಾತಿ ಕಬಳಿಸುವ ಹುನ್ನಾರ; ವೇಣುಗೋಪಾಲ್‌ ಆತಂಕ

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ವೇಣುಗೋಪಾಲ್‌ ಆತಂಕ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 14:28 IST
Last Updated 14 ಆಗಸ್ಟ್ 2021, 14:28 IST
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯನ್ನು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್‌ ಉದ್ಘಾಟಿಸಿದರು
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯನ್ನು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್‌ ಉದ್ಘಾಟಿಸಿದರು   

ಕೋಲಾರ: ‘ಪ್ರಬಲ ವರ್ಗದವರು 2ಎ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಯಾಗಲು ಹೋರಾಟ ನಡೆಸುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಪ್ರಬಲ ವರ್ಗಗಳನ್ನು 2ಎಗೆ ಸೇರಿಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್‌ ಆತಂಕ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ನಡೆದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರವು ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಇದು ಹಿಂದುಳಿದ ವರ್ಗಗಳ ಮೀಸಲಾತಿ ಕಬಳಿಸುವ ಹುನ್ನಾರ’ ಎಂದು ಕಿಡಿಕಾರಿದರು.

‘ಹಿಂದುಳಿದ ವರ್ಗಗಳ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟಕ್ಕೆ ಅಣಿಗೊಳಿಸಬೇಕು. ಈ ನಿಟ್ಟಿನಲ್ಲಿ ರಾಜ್ಯವ್ಯಾಪಿ ಪ್ರವಾಸ ಕೈಗೊಂಡಿದ್ದು, ಕೋಲಾರ ಜಿಲ್ಲೆಯಿಂದಲೇ ಆರಂಭಿಸಲಾಗುತ್ತಿದೆ. ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಜಾತಿವಾರು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ವರದಿ ಸ್ವೀಕರಿಸಿ ಸಾರ್ವಜನಿಕವಾಗಿ ಚರ್ಚೆಗೆ ಇಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಎಚ್‌.ಕಾಂತರಾಜು ನೇತೃತ್ವದ ಆಯೋಗವು ನಡೆಸಿದ ಜಾತಿವಾರು ಸಮೀಕ್ಷೆಗೆ ಸುಮಾರು ₹ 187 ಕೋಟಿ ವೆಚ್ಚವಾಗಿದೆ. ಆಯೋಗವು 2015ರಲ್ಲೇ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಿದೆ. ಆದರೆ, ಈ ವರದಿ 6 ವರ್ಷಗಳಿಂದ ದೂಳು ಹಿಡಿಯುತ್ತಿದೆ. ಸರ್ಕಾರ ವರದಿ ಸ್ವೀಕರಿಸುವ ಮನಸ್ಸು ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ 15, ಪರಿಶಿಷ್ಟ ಪಂಗಡಕ್ಕೆ ಶೇ 3, ಪ್ರವರ್ಗ–1ಕ್ಕೆ ಶೇ 4, ಪ್ರವರ್ಗ–2ಎಗೆ ಶೇ 15, ಪ್ರವರ್ಗ–3 ಬಿಗೆ ಶೇ 5, 3ಎಗೆ ಶೇ 4, 2ಬಿಗೆ ಶೇ 4ರಷ್ಟು ಮೀಸಲಾತಿ ಸಿಕ್ಕಿದೆ. ಜನಸಂಖ್ಯೆಯಲ್ಲಿ ಶೇ 53ರಷ್ಟಿರುವ ಹಿಂದುಳಿದ ವರ್ಗಗಳಿಗೆ ನ್ಯಾಯಸಮ್ಮತವಾಗಿ ಮೀಸಲಾತಿ ಸಿಕ್ಕಿಲ್ಲ. ಹೀಗಾಗಿ ಜಾತಿವಾರು ಸಮೀಕ್ಷೆ ವರದಿ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಒಪ್ಪುವುದಿಲ್ಲ: ‘ಬಲಿಷ್ಠ ಜಾತಿಗಳು ಮೀಸಲಾತಿಗೆ ಹೋರಾಟ ನಡೆಸುವುದನ್ನು ಒಪ್ಪುವುದಿಲ್ಲ. ಹಿಂದುಳಿದ ವರ್ಗಗಳಿಗೆ ಸೇರಿದ 25 ಮಠಗಳ ಸ್ವಾಮೀಜಿಗಳನ್ನು ಒಗ್ಗೂಡಿಸಿ ಹೋರಾಟ ನಡೆಸುವ ಪ್ರಯತ್ನ ನಡೆದಿದೆ. ಹಿಂದುಳಿದ ವರ್ಗಗಳಲ್ಲಿನ ಸಣ್ಣ ಜಾತಿ, ಸಮುದಾಯಗಳನ್ನು ಒಗ್ಗೂಡಿಸಲಾಗುತ್ತಿದೆ. ಮೀಸಲಾತಿ ವಿಚಾರದಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್‌.ರಮೇಶ್‌ ಗುಡುಗಿದರು.

ಹೋರಾಟ ಅನಿವಾರ್ಯ: ‘ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಪಟ್ಟಿಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ಗಡುವು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಹಿಂದುಳಿದ ವರ್ಗಗಳಲ್ಲಿನ 200 ಜಾತಿಗಳಿಗೆ ಅನ್ಯಾಯ ಆಗಬಾರದೆಂಬ ಸದುದ್ದೇಶದಿಂದ ಜಾಗೃತಿ ಮೂಡಿಸುತ್ತಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ವಿವರಿಸಿದರು.

‘ಹಸಿದವರ ಬಟ್ಟಲಿನಿಂದ ಅನ್ನ ಕಸಿಯುವ ಪ್ರಯತ್ನ ನಡೆದಾಗ ಹೋರಾಟ ಅನಿವಾರ್ಯ. ಈ ಹೋರಾಟದ ಹಿಂದೆ ರಾಜಕೀಯ ಉದ್ದೇಶವಿಲ್ಲ. ಹೀಗಾಗಿ ಎಲ್ಲಾ ಪಕ್ಷಗಳಲ್ಲಿನ ಹಿಂದುಳಿದ ವರ್ಗಗಳ ನಾಯಕರು ಹೋರಾಟಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ದೇವಾಂಗ ಸಮಾಜದ ಅಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಜಿ.ರಮೇಶ್, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಯಲ್ಲಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.