ADVERTISEMENT

ಸೋಂಕಿತರ ಸಂಪರ್ಕ: ಸೋಂಕು ಹೆಚ್ಚಳ

ಆತಂಕಕಾರಿ ಬೆಳವಣಿಗೆ: ಜಿಲ್ಲಾಧಿಕಾರಿ ಸತ್ಯಭಾಮ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 16:42 IST
Last Updated 18 ಜುಲೈ 2020, 16:42 IST
ಸಿ.ಸತ್ಯಭಾಮ
ಸಿ.ಸತ್ಯಭಾಮ   

ಕೋಲಾರ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಪರ್ಕದಿಂದ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮನವಿ ಮಾಡಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಈ ಹಿಂದೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಬಂದವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಸೋಂಕು ಹರಡುವ ಪ್ರಮಾಣ ಕಡಿಮೆಯಿತ್ತು. ಆದರೆ, ಈಗ ಸೋಂಕಿತರ ಸಂಪರ್ಕಕ್ಕೆ ಬಂದವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಆತಂಕಕಾರಿ ಬೆಳವಣಿಗೆ’ ಎಂದರು.

‘ಜಿಲ್ಲಾಡಳಿತವು ಸೋಂಕು ಹರಡುವಿಕೆ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಸೋಂಕು ತಡೆಗೆ ಜನರು ಕೈಜೋಡಿಸಬೇಕು. ಕೆಮ್ಮು, ನೆಗಡಿ, ತಲೆ ನೋವು ಹಾಗೂ ಜ್ವರದ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯ ತೋರದೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೊರೊನಾ ಸೋಂಕಿನ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇದು ಗುಣಮುಖವಾಗುವ ಕಾಯಿಲೆಯಾಗಿದ್ದು, ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಈ ಹಿಂದೆ ವರದಿಯಾದ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಿನ ಜನರಲ್ಲಿ ರೋಗ ಲಕ್ಷಣ ಕಂಡು ಬಂದಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ವಿಷಮ ಶೀತ ಜ್ವರ ಮತ್ತು ತೀವ್ರ ಉಸಿರಾಟ ಸಮಸ್ಯೆಯ ಲಕ್ಷಣ ಕಂಡು ಬರುತ್ತಿದೆ’ ಎಂದು ಮಾಹಿತಿ ನೀಡಿದರು.

2ನೇ ಸ್ಥಾನ: ‘ಜಿಲ್ಲೆಯಲ್ಲಿ ಪರೀಕ್ಷಾ ಮಾದರಿ ಸಂಗ್ರಹ ಪ್ರಮಾಣ ಹೆಚ್ಚಿರುವುರಿಂದ ವೈದ್ಯಕೀಯ ವರದಿ ಬರುವುದು ವಿಳಂಬವಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯ ಮಾದರಿ ಪರೀಕ್ಷಿಸಲಾಗುತ್ತಿದೆ. ಜಿಲ್ಲೆಯು ಕೋವಿಡ್‌ ತಪಾಸಣೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ’ ಎಂದು ಸ್ಪಷ್ಟಪಡಿಸಿದರು.

‘ಕೊರೊನಾ ಸೋಂಕಿತರು ಹಾಗೂ ಮಾದರಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಪ್ರತಿ ತಾಲ್ಲೂಕು ಆಸ್ಪತ್ರೆಗೆ ಕೋವಿಡ್‌ ತಪಾಸಣೆ ಉಪಕರಣ ಖರೀದಿಸಲು ಅನುಮತಿ ನೀಡಲಾಗಿದೆ. ಇದರಿಂದ ಹೆಚ್ಚಿನ ಪರೀಕ್ಷೆ ಮಾಡಲು ಸಹಾಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್‌.ವಿಜಯ್‌ಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಚಾರಿಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯಾ ದೀಪಿಕಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.