ADVERTISEMENT

ಆಲೋಚನಾತ್ಮಕ ಮನಸ್ಥಿತಿ ಮಾಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 15:05 IST
Last Updated 19 ಜನವರಿ 2021, 15:05 IST
ಕೋಲಾರದಲ್ಲಿ ಮಂಗಳವಾರ ನಡೆದ ಲೋಕದೃಷ್ಠಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಬಸವರಾಜ ಅವರನ್ನು ಸನ್ಮಾನಿಸಲಾಯಿತು.
ಕೋಲಾರದಲ್ಲಿ ಮಂಗಳವಾರ ನಡೆದ ಲೋಕದೃಷ್ಠಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಬಸವರಾಜ ಅವರನ್ನು ಸನ್ಮಾನಿಸಲಾಯಿತು.   

ಕೋಲಾರ: ‘ವಿದ್ಯಾರ್ಥಿಗಳಲ್ಲಿ ಆಲೋಚನಾತ್ಮಕ ಮನಸ್ಥಿತಿ ಮಾಯವಾಗಿದೆ’ ಎಂದು ರಾಜ್ಯ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಬಸವರಾಜ ಅಭಿಪ್ರಾಯಪಟ್ಟರು.

ಇಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕವಿ ಶರಣಪ್ಪ ಗಬ್ಬೂರ್‌ರ ‘ಲೋಕದೃಷ್ಠಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ‘ಸಂಸ್ಥೆಯು ವೈಜ್ಞಾನಿಕ ಚಿಂತನೆ ಬೆಳೆಸಲು ರಾಜ್ಯದೆಲ್ಲೆಡೆ ಕಾರ್ಯೋನ್ಮುಖವಾಗಿದೆ’ ಎಂದು ಹೇಳಿದರು.

‘ಕೇವಲ ನಂಬಿಕೆ ಮತ್ತು ಹೇಳಿಕೆಯಿಂದ ಸಂಸ್ಕೃತಿ ಉಳಿಸಲು ಅಸಾಧ್ಯ. ವಿಚಾರಿಸುವ ಮತ್ತು ಪರಿಶೀಲಿಸುವ ಮೂಲಕ ಹೊಸ ಚಿಂತನೆಗಳಿಗೆ ನಾಂದಿ ಹಾಡಬೇಕು. ಹೊರ ದೇಶದ ಜ್ಞಾನ, ತಂತ್ರಜ್ಞಾನದ ಎರವಲು ಪಡೆದು ನಮ್ಮ ದೇಶದ ಕಲೆ ಮತ್ತು ವಿಜ್ಞಾನ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನವ ಭಾರತವು ವಿಜ್ಞಾನ ಮತ್ತು ವೈಚಾರಿಕತೆ ತಳಹದಿಯ ಮೇಲೆ ನಿಲ್ಲಬೇಕೆ ಹೊರತು ಸನಾತನ ಪರಂಪರೆ ಮತ್ತು ಮೌಢ್ಯಗಳ ಆಚರಣೆಗಳಿಂದಲ್ಲ. ಆಧುನಿಕ ಯುಗದಲ್ಲೂ ಕೂಡ ಕೆಲ ಸಂದರ್ಭದಲ್ಲಿ ವಿಜ್ಞಾನಿಗಳು ಸನಾತನ ಪರಂಪರೆಯ ಸಂಸ್ಕೃತಿ ಬಿತ್ತರಿಸುತ್ತಿರುವುದು ಸೋಜಿಗದ ಸಂಗತಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ವಿಜ್ಞಾನಿಗಳು ದೇಶವನ್ನು ಯಾಂತ್ರಿಕವಾಗಿ ಬಿಂಬಿಸುತ್ತಿದ್ದರೆ. ಮತ್ತೊಂದೆಡೆ ಜ್ಯೋತಿಷಿಗಳು ಮೌಢ್ಯದ ನೆರಳಲ್ಲಿ ಸಾಗುತ್ತಿರುವುದು ದುರಂತ. ವಿಚಾರ ಮಾಡುವ ಶಕ್ತಿ ಬೆಳೆಸಿಕೊಳ್ಳಬೇಕು. ತಾರ್ಕಿಕ ವಿಚಾರಧಾರೆ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕು. ಭಾವನಾತ್ಮಕ ಅಂಶಗಳಿಗೆ ಬೆಲೆ ಕೊಡದೆ ಸತ್ಯದ ಹಾದಿಯಲ್ಲಿ ಸಾಗಬೇಕು’ ಎಂದು ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ವೆಂಕಟಶಿವಪ್ಪ ಕಿವಿಮಾತು ಹೇಳಿದರು.

ಕವಿ ಶರಣಪ್ಪ ಗಬ್ಬೂರ್‌, ರಾಜ್ಯ ಜ್ಞಾನ ವಿಜ್ಞಾನ ಸಮಿತಿ ಸಹ ಕಾರ್ಯದರ್ಶಿ ಕೆ.ಶ್ರೀನಿವಾಸ, ಜಿಲ್ಲಾ ಘಟಕದ ಖಜಾಂಚಿ ಅಶ್ವತ್ಥಪ್ಪ, ಕಾರ್ಯದರ್ಶಿ ನಂಜುಂಡಪ್ಪ, ಉಪಾಧ್ಯಕ್ಷ ಎಸ್.ಬಸವರಾಜ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.