ADVERTISEMENT

ಸರ್ಕಾರಿ ಜಮೀನು ಒತ್ತುವರಿ: ತದ್ವಿರುದ್ಧ ವರದಿ, ಅನುಮಾನಕ್ಕೆ ಎಡೆ

ಸರ್ಕಾರಿ ಜಮೀನು ಒತ್ತುವರಿ: ಸರ್ವೆಯಲ್ಲಿ ಸಾಬೀತು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 17:12 IST
Last Updated 30 ಸೆಪ್ಟೆಂಬರ್ 2020, 17:12 IST
ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾಗಿರುವ ಪೆಟ್ರೋಲ್‌ ಬಂಕ್‌.
ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾಗಿರುವ ಪೆಟ್ರೋಲ್‌ ಬಂಕ್‌.   

ಕೋಲಾರ: ನಗರದ ಸಂಚಾರ ಪೊಲೀಸ್‌ ಠಾಣೆ ಬಳಿ ಸರ್ಕಾರಿ ಜಮೀನು ಒತ್ತುವರಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕಂದಾಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ತದ್ವಿರುದ್ಧ ವರದಿ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕಂದಾಯ ಇಲಾಖೆ ಅಧಿಕಾರಿಗಳು ಸಂಚಾರ ಪೊಲೀಸ್‌ ಠಾಣೆ ಬಳಿಯ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ತೆರವು ಮಾಡುವಂತೆ ಆದೇಶಿಸಿದ್ದಾರೆ. ನಗರಸಭೆ ಅಧಿಕಾರಿಗಳು ಈ ಜಮೀನು ನಗರಸಭೆಯ ಸ್ವತ್ತಾಗಿದ್ದು, ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ ಎಂದು ವರದಿ ಕೊಟ್ಟಿದ್ದಾರೆ.

ಕಸಬಾ ಹೋಬಳಿಯ ಸರ್ವೆ ಸಂಖ್ಯೆ 149/2ರ 1 ಎಕರೆ ಜಮೀನಿನಲ್ಲಿ 10 ಗುಂಟೆ ಜಾಗವನ್ನು ಸತೀಶ್‌ ಎಂಬುವರು ಒತ್ತುವರಿ ಮಾಡಿ ಪೆಟ್ರೋಲ್‌ ಬಂಕ್‌ ನಿರ್ಮಿಸಿದ್ದಾರೆ. ಈ ಜಮೀನಿಗೆ ಸಂಬಂಧಪಟ್ಟಂತೆ ಒತ್ತುವರಿದಾರರು ನಕಲಿ ದಾಖಲೆಪತ್ರ ಸೃಷ್ಟಿಸಿದ್ದಾರೆ ಎಂದು ಎಂ.ರಾಘವೇಂದ್ರ ಎಂಬುವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು.

ADVERTISEMENT

ಈ ದೂರು ಆಧರಿಸಿ ಜಮೀನಿನ ಸರ್ವೆ ಮಾಡಿರುವ ಭೂಮಾಪನ ಇಲಾಖೆ ಅಧಿಕಾರಿಗಳು ಸರ್ವೆ ಸಂಖ್ಯೆ 149/2ರಲ್ಲಿನ 10 ಗುಂಟೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ವರದಿ ನೀಡಿದ್ದಾರೆ. ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಹಕ್ಕು ದಾಖಲೆ ಶಿರಸ್ತೇದಾರರು ಹಾಗೂ ಸರ್ಕಾರಿ ಭೂಮಾಪಕರು ಜಮೀನು ಒತ್ತುವರಿ ಆಗಿರುವುದನ್ನು ವರದಿಯಲ್ಲಿ ದೃಢೀಕರಿಸಿದ್ದಾರೆ.

ಈ ಜಮೀನಿನ ವಿಚಾರವಾಗಿ ವರದಿ ನೀಡಿರುವ ಕೋಲಾರ ನಗರಸಭೆ ಆಯುಕ್ತರು, ‘ನಗರಸಭೆ ಕಚೇರಿಯಲ್ಲಿ ಲಭ್ಯವಿರುವ ದಾಖಲೆಪತ್ರಗಳ ಪ್ರಕಾರ 17ನೇ ವಾರ್ಡ್‌ ವ್ಯಾಪ್ತಿಯ ದರ್ಗಾ ಮೊಹಲ್ಲಾ ಬಡಾವಣೆಯಲ್ಲಿನ ಸರ್ವೆ ಸಂಖ್ಯೆ 149/2ರ ಜಮೀನು ನಗರಸಭೆಯ ಸ್ವತ್ತು. ಈ ಜಾಗವನ್ನು 1948ರಲ್ಲಿ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿಗೆ ದೂರು: ಭೂಮಾಪನ ಇಲಾಖೆ ಅಧಿಕಾರಿಗಳ ಸರ್ವೆ ವರದಿ ಆಧರಿಸಿ ಉಪ ವಿಭಾಗಾಧಿಕಾರಿಯು, ಸರ್ಕಾರಿ ಜಮೀನು ಒತ್ತುವರಿ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ವರದಿ ನೀಡುವಂತೆ ತಹಶೀಲ್ದಾರ್‌ಗೆ ಆದೇಶಿಸಿದ್ದಾರೆ. ಆದರೆ, ತಹಶೀಲ್ದಾರ್‌ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ದೂರುದಾರ ರಾಘವೇಂದ್ರ ಅವರು ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದಾರೆ.

ಜಮೀನಿನ ಪಹಣಿಯಲ್ಲಿ ತೋಪು ಎಂದು ಉಲ್ಲೇಖಿಸಲಾಗಿದೆ. ಆದರೆ, ಖಾಸಗಿ ವ್ಯಕ್ತಿಗಳು ನಕಲಿ ದಾಖಲೆಪತ್ರ ಸೃಷ್ಟಿಸಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಸರ್ವೆ ನಡೆಸಿದಾಗ ಜಮೀನು ಒತ್ತುವರಿ ಆಗಿರುವುದು ಸಾಬೀತಾಗಿದೆ. ಆದ್ದರಿಂದ ಒತ್ತುವರಿ ತೆರವು ಮಾಡಿಸಿ ಎಂದು ರಾಘವೇಂದ್ರ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಮತ್ತು ಒತ್ತುವರಿ ತೆರವುಗೊಳಿಸಬೇಕು. ಜಮೀನಿನ ನಕಲಿ ದಾಖಲೆಪತ್ರ ಸೃಷ್ಟಿಗೆ ಸಹಕರಿಸಿರುವ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಘವೇಂದ್ರ ದೂರಿನಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.