
ಬಂಗಾರಪೇಟೆ: ನಗರದ ಕೋಮುಲ್ ಪ್ರಾದೇಶಿಕ ಕಚೇರಿಯಲ್ಲಿ ಸಹಕಾರ ಒಕ್ಕೂಟದ ವತಿಯಿಂದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸದ ಎಂ. ಮಲ್ಲೇಶಬಾಬು, ‘ಸಹಕಾರಿ ವಲಯವು ಕೇವಲ ಆರ್ಥಿಕ ಸಂಸ್ಥೆಯಷ್ಟೇ ಅಲ್ಲದೆ, ಪ್ರಮುಖ ನಾಯಕರ ರಾಜಕೀಯ ಭವಿಷ್ಯಕ್ಕೂ ವೇದಿಕೆಯಾಗಿದೆ. ಪ್ರಮುಖ ನಾಯಕರು ಸಹಕಾರಿ ವಲಯದ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದಾರೆ. ಹೀಗಾಗಿ, ಸಹಕಾರಿ ಕ್ಷೇತ್ರವು ಉದಯೋನ್ಮುಖ ನಾಯಕರ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ’ ಎಂದು ಪ್ರತಿಪಾದಿಸಿದರು.
ಸಹಕಾರಿ ವಲಯವು ನಾಯಕತ್ವಕ್ಕೆ ಪ್ರಜಾಪ್ರಭುತ್ವದ ತರಬೇತಿ ಮೈದಾನವಾಗಿ ಕಾರ್ಯನಿರ್ವಹಿಸುತ್ತದೆ. ರಾಜಕೀಯ ಮತ್ತು ಆಡಳಿತದ ಎರಡೂ ಕ್ಷೇತ್ರಗಳಿಗೆ ಅನುಭವಿ ನಾಯಕರನ್ನು ಪೂರೈಸುತ್ತದೆ. ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಿಂದ ಬೆಳೆದ ಅನೇಕರು ಪ್ರಭಾವಿ ನಾಯಕರೆನಿಸಿದ್ದಾರೆ. ಅವರೆಲ್ಲರೂ ಸಹಕಾರಿ ಚಳವಳಿಯ ಮೂಲಕ ಜನರನ್ನು ಸಂಘಟಿಸುವ ಕಲೆ ಕಲಿತವರು ಎಂದು ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ನಾಲ್ವರು ಶಾಸಕರು ಸಹಕಾರಿ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಅನೇಕ ರಾಜಕಾರಣಿಗಳು ಸಹಕಾರಿ ವಲಯದಿಂದ ಬಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದರು.
ಸಹಕಾರ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣಪ್ಪ ಮಾತನಾಡಿ, ಭಾರತದ ಮೊದಲ ಸಹಕಾರಿ ವಿಶ್ವ ವಿದ್ಯಾಲಯವಾಗಿ ತ್ರಿಭುವನ್ ವಿಶ್ವವಿದ್ಯಾಲಯ ಆರಂಭವಾಗಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು 2025ರಲ್ಲಿ ವಿಶ್ವ ವಿದ್ಯಾಲಯ ಮಸೂದೆ ಮಂಡಿಸಿ ಅಂಗೀಕಾರ ಪಡೆಯುವ ಮೂಲಕ ಸಹಕಾರ ಚಳವಳಿಯ ಪೂರಕ ಬೆಳವಣಿಗೆಗೆ ಚಾಲನೆ ನೀಡಿದ್ದಾರೆ. ಸಹಕಾರಿ ಸಂಸ್ಥೆಗಳಿಗೆ ತಾಂತ್ರಿಕ ಮತ್ತು ನಿರ್ವಹಣಾ ಶಿಕ್ಷಣದಲ್ಲಿ ಪರಿಣತಿ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎನ್. ರಂಗಾನಾಥಾಚಾರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್. ರಘುನಾಥ್, ಎಚ್.ಕೆ. ನಾರಾಯಣಸ್ವಾಮಿ, ಬಾಲಚಂದ್ರ, ಎಂ. ಮೀನಾಕ್ಷಿ, ಸತೀಶ್, ಮಾರ್ಕಂಡೇಗೌಡ, ರಮ್ಯ, ಮುರಳಿಗೌಡ, ಎಸ್. ಮಂಜುನಾಥ, ಜೆ.ಸಿ. ಮಂಜುನಾಥರೆಡ್ಡಿ, ಡಾ. ಗಿರೀಶ್ ಗೌಡ, ಡಾ. ಯತೀಶ್, ಭಾನುಪ್ರಕಾಶ್, ಅಂಬರೀಷ್, ಸದಾಶಿವಯ್ಯ, ನಟರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.