ಕೋಲಾರ: ಜಿಲ್ಲೆಯ ಪಾಲಿಗೆ ಶುಭ ಶುಕ್ರವಾರವು ಅಶುಭವಾಗಿದ್ದು, ಕೊರೊನಾ ಸೋಂಕಿನ ಮಹಾ ಸ್ಫೋಟವಾಗಿದೆ. ಒಂದೇ ದಿನ 98 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಆರೇಳು ತಿಂಗಳಿಂದ ಒಂದೇ ದಿನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿರಲಿಲ್ಲ. ಬುಧವಾರ (ಜ.5) 24 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತು. ಇದೀಗ ಶುಕ್ರವಾರ ಸೋಂಕಿನ ಮಹಾ ಸ್ಫೋಟವಾಗಿದ್ದು, ಸೋಂಕಿನ ನಾಗಾಲೋಟಕ್ಕೆ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ.
ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿರುವುದು ಆರೋಗ್ಯ ಇಲಾಖೆಯ ನಿದ್ದೆಗಡೆಸಿದೆ. ಕೋವಿಡ್–19ಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾ ಕೇಂದ್ರದ ಎಸ್ಎನ್ಆರ್ ಆಸ್ಪತ್ರೆ ಹಾಗೂ ಆರ್.ಎಲ್.ಜಾಲಪ್ಪ ಆಸ್ಪತ್ರೆಯು ಸೋಂಕಿತರಿಂದ ಭರ್ತಿಯಾಗುತ್ತಿದ್ದು, ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚುತ್ತಾ ಹೋದರೆ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆವರೆಗೆ ಸಕ್ರಿಯ ಸೋಂಕಿತರ ಸಂಖ್ಯೆ 75 ಇತ್ತು. ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 9 ಮಂದಿ ಗುಣಮುಖರಾಗಿ ಬೆಳಿಗ್ಗೆಯಷ್ಟೇ ಮನೆಗೆ ಮರಳಿದ್ದರು. ಕೋಲಾರ ತಾಲ್ಲೂಕಿನ 4 ಮಂದಿ, ಮಾಲೂರು ತಾಲ್ಲೂಕಿನ 3 ಮಂದಿ ಮತ್ತು ಬಂಗಾರಪೇಟೆ ತಾಲ್ಲೂಕಿನ ಇಬ್ಬರನ್ನು ಮನೆಗೆ ಕಳುಹಿಸಲಾಗಿತ್ತು.
ಇದರ ಬೆನ್ನಲ್ಲೇ ಸೋಂಕಿನ ಸುನಾಮಿ ಎದ್ದಿದ್ದು, ಗುಣಮುಖರಾದವರ ಸಂಖ್ಯೆಗೆ ಹೋಲಿಸಿದರೆ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯೇ ಹೆಚ್ಚಿದೆ. ಕೋಲಾರ ತಾಲ್ಲೂಕಿನ 38 ಮಂದಿಗೆ, ಮಾಲೂರು ತಾಲ್ಲೂಕಿನ 24 ಮಂದಿಗೆ, ಬಂಗಾರಪೇಟೆ ತಾಲ್ಲೂಕಿನ 10 ಮಂದಿಗೆ, ಕೆಜಿಎಫ್ ತಾಲ್ಲೂಕಿನ 16 ಮಂದಿಗೆ, ಮುಳಬಾಗಿಲು ತಾಲ್ಲೂಕಿನ 9 ಮಂದಿಗೆ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ.
2,100 ಮಂದಿಗೆ ಪರೀಕ್ಷೆ: ಆರೋಗ್ಯ ಇಲಾಖೆಗೆ ಜಿಲ್ಲೆಯಲ್ಲಿ ದಿನಕ್ಕೆ 2,100 ಮಂದಿಗೆ ಕೋವಿಡ್ ಪರೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಈ ನಿಗದಿತ ಗುರಿಯನ್ನು ಮೀರಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಮುಖ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಜನರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.