
ಶ್ರೀನಿವಾಸಪುರ: ತವರು ತಾಲ್ಲೂಕನ್ನು ಭ್ರಷ್ಟಾಚಾರ ಮುಕ್ತ ಮಾಡುವುದೇ ನನ್ನ ಪ್ರಮುಖ ಉದ್ದೇಶ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಹೇಳಿದರು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಂಗಳವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳು ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
‘ಎಲ್ಲಿ ಹೋದರೂ ತಮ್ಮ ತಾಲ್ಲೂಕು ಮೊದಲು ಸರಿಮಾಡಿ ಎಂದು ಹೇಳುತ್ತಾರೆ. ಇದರಿಂದಾಗಿ ಪದೇಪದೇ ನಮ್ಮ ತಾಲ್ಲೂಕನ್ನು ಸರಿಪಡಿಸಲು ಭೇಟಿ ನೀಡುತ್ತಿದ್ದೇನೆ. ಅಧಿಕಾರಿಗಳಿಗೆ ಆತ್ಮಸಾಕ್ಷಿ ಇಲ್ಲ. ನಮ್ಮ ಜನ ಮೊದಲು ಬದಲಾಗಬೇಕು. ನಂತರ ಸಮಾಜ ಬದಲಾಗಲು ಸಾಧ್ಯ’ ಎಂದರು.
ಜಿಲ್ಲೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಅವರು ಹಲವು ತಾಸು ಕಡತಗಳ ಪರಿಶೀಲನೆ ನಡೆಸಿದರು. ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ತಾಲ್ಲೂಕಿನ ಜೆ.ತಿಮ್ಮಸಂದ್ರ, ಆರಿಕುಂಟೆ, ದಳಸನೂರು, ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದರು. ಸರ್ಕಾರದ ಪ್ರಮುಖ ಯೋಜನೆಗಳಾದ ನರೇಗಾ ಅನುಷ್ಠಾಠ, ಕುಡಿಯುವ ನೀರು ಯೋಜನೆಗಳ ಪ್ರಗತಿ, ನೈರ್ಮಲ್ಯ ನಿರ್ವಹಣೆ ಮತ್ತು ಕಂದಾಯ ವಸೂಲಾತಿಗಳಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಕಡತಗಳ ಪರಿಶೀಲನೆ ವೇಳೆ ಆಡಳಿತ ನಿರ್ವಹಣೆಯಲ್ಲಿನ ಹಲವು ಗಂಭೀರ ಲೋಪದೋಷಗಳು ಬೆಳಕಿಗೆ ಬಂದವು. ಮುಖ್ಯವಾಗಿ, ಕೆಲ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಕಡತ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಜಾರಿಗೊಳಿಸುವಂತೆ ಹಾಗೂ ಕಡತಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಮಯದಲ್ಲಿ ದಳಸನೂರು ಗ್ರಾಮದ ವಸತಿ ನಿಲಯ, ಆಸ್ಪತ್ರೆ, ಸರ್ಕಾರಿ ಶಾಲೆಗೆ ಭೇಟಿ ನೀಡಿ ಸ್ವಚ್ಛತೆ ಕಾಪಾಡುವಂತೆ ಅಲ್ಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಾಸ್ತೇನಹಳ್ಳಿ ಗ್ರಾ.ಪಂ ಸಂಬಂಧಿಸಿದಂತೆ ಸರ್ಕಾರಿ ಭೂಮಿಯನ್ನು ಸರ್ವೆ ಮಾಡಿ ಸಾರ್ವಜನಿಕರ ಸಹಿ ಪಡೆದು ಆ ಭೂಮಿಯನ್ನು ಗ್ರಾ.ಪಂ ಹದ್ದುಬಸ್ತುನಲ್ಲಿ ಇಡಲು ಪಿಡಿಒಗೆ ಸೂಚಿಸಿದರು.
ಪಟ್ಟಣದ ಬಾಲಕ, ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಕೆಲ ಅವ್ಯವಸ್ಥೆಗಳಿಗೆ ಅಲ್ಲಿನ ಅಧಿಕಾರರಿಗಳಿಗೆ ಸೂಚನೆ ನೀಡಿ ಬಂದಿದ್ದೇನೆ. ಜಿಲ್ಲೆಯಲ್ಲಿ 440 ಸ್ವಯಂಪ್ರೇರಿತ ಪ್ರಕರಣ ಹಾಕಲಾಗಿತ್ತು. ಅದರಲ್ಲಿ ಈಗಾಗಲೇ 250 ಪರಿಹಾರ ಸಿಕ್ಕಿದ್ದು, ಈವತ್ತು 7 ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. 2 ತಿಂಗಳಿನಿಂದ 6 ತಿಂಗಳು ಗಡುವ ನೀಡಲಾಗಿದ್ದು, ಅದರಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದಿದ್ದರೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಲೋಕಾಯುಕ್ತ ನ್ಯಾಯಮೂರ್ತಿ ಅರವಿಂದ್, ಜಿಲ್ಲಾ ಲೋಕಾಯುಕ್ತ ಎಸ್‍ಪಿ ಆ್ಯಂಟನಿ ಜಾನ್, ಪೊಲೀಸ್ ಇಲಾಖೆ ಡಿವೈಎಸ್‍ಪಿ ಮೊನಿಶಾ, ಡಿವೈಎಸ್‍ಪಿಗಳಾದ ಟಿ.ಸಿ.ವೆಂಕಟೇಶ್, ಅನಿಲ್‍ಕುಮಾರ್, ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ಇಒ ಕೆ.ಸರ್ವೆಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ರಾಜೇಶ್, ವಾಟರ್ ಬೋರ್ಡ್ ಎಇಇ ಸುರೇಶ್, ಬೆಸ್ಕಾಂ ಇಲಾಖೆ ಎಂಜಿನಿಯರ್ ನಂಜುಂಡೇಶ್ವರ, ಪಿಎಸ್‍ಐ ಜಯರಾಮ್, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಆಂಜನಪ್ಪ, ರೇಣುಕಾ, ಪ್ರದೀಪ್ ಪೂಜಾರಿ, ಜೆ.ತಿಮ್ಮಸಂದ್ರ ಗ್ರಾ.ಪಂ. ಪಿಡಿಒಗಳಾದ ಕಲ್ಯಾಣಿ, ವಿನೋದಾ, ಆರಿಕುಂಟೆ ಪಿಡಿಒ ಶಂಕರಪ್ಪ, ದಳಸನೂರು ಪಿಡಿಒ ಮಂಗಳಾಂಬ, ಮಾಸ್ತೇನಹಳ್ಳಿ ಪಿಡಿಒ ಕೆ.ಪಿ. ಶ್ರೀನಿವಾಸರೆಡ್ಡಿ, ಲೋಕಾಯುಕ್ತ ಇಲಾಖೆ ಸಿಬ್ಬಂದಿ ಎಸ್.ಆರ್.ದೇವ್, ಶ್ರೀನಾಥ್, ನಾಗಭೂಷಣ್, ರಮೇಶ್, ಕಿಶೋರ್, ಶಿವಶಂಕರ್, ವಾಸದೇವ್, ಅಜಯ್, ಮಂಜಪ್ಪ, ನಾಗವೇಣಿ, ಯಶೋಧಾ, ಮಾನಸ, ಪವಿತ್ರ, ಗೀತ, ಮುನಿರತ್ನ, ಶೋಭಾ, ತಾ.ಪಂ ಎಡಿ ರಾಮಪ್ಪ, ವ್ಯವಸ್ಥಾಪಕ ಮಂಜುನಾಥ್ ಇದ್ದರು.
ಸಾರ್ವಜನಿಕರ ಹಣದ ಸದ್ಬಳಕೆ ಮತ್ತು ಪಾರದರ್ಶಕ ಆಡಳಿತಕ್ಕೆ ಅಡೆತಡೆ ಉಂಟುಮಾಡುವ ಯಾವುದೇ ನಿರ್ಲಕ್ಷ್ಯವನ್ನು ಸಹಿಸಲಾಗದು ಸ್ವಯಂಪ್ರೇರಿತ ಪ್ರಕರಣ ದಾಖಲಿಸುವೆ.– ಬಿ.ವೀರಪ್ಪ, ಉಪಲೋಕಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.