ADVERTISEMENT

‘ಧರ್ಮದ ಹೆಸರಲ್ಲಿ ದೇಶ ಛಿದ್ರ’

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 4:48 IST
Last Updated 18 ಫೆಬ್ರುವರಿ 2021, 4:48 IST

ಕೋಲಾರ: ‘ಬಿಜೆಪಿಯವರು ಧರ್ಮದ ಹೆಸರಿನಲ್ಲಿ ದೇಶ ಛಿದ್ರಗೊಳಿಸುತ್ತಿದ್ದಾರೆ. ಭವಿಷ್ಯದಲ್ಲಿ ದೇಶಕ್ಕೆ ಅಪಾಯವಿದ್ದು, ಬಿಜೆಪಿ ದುರಾಡಳಿತದ ವಿರುದ್ಧ ಹೋರಾಟ ಮಾಡಬೇಕು’ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಗುಡುಗಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಎಲ್ಲ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗದ ಬಿಜೆಪಿಯವರ ಕೆಲಸಕ್ಕೆ ನಾವು ಯಾವುದೇ ಸಹಕಾರ ನೀಡುವುದಿಲ್ಲ’ ಎಂದು ಕಿಡಿಕಾರಿದರು.

‘ಅಡ್ವಾಣಿಯವರು ಇಟ್ಟಿಗೆ ತೆಗೆದುಕೊಂಡು ಹೋಗಿದ್ದಾಗಲೂ 10 ವರ್ಷ ಕಾಂಗ್ರೆಸ್ ಆಡಳಿತ ನಡೆಸಿತ್ತು. ರಾಮಮಂದಿರ ಕಟ್ಟುವುದು ಹಿಂದೂಗಳಿಗೆ ಗೌರವ ನೀಡುವಂತಹುದು, ಪೂಜೆ ಮಾಡುವುದಾಗಿದೆ. ಅದೇ ರೀತಿ ಭರತ ಖಂಡದಲ್ಲಿ ಮಸೀದಿ, ಮಂದಿರ ಚರ್ಚ್‍ಗಳೂ ಇವೆ. ಯಾವುದನ್ನೂ ಭಿನ್ನವಾಗಿ ನೋಡುವಂತಿಲ್ಲ. ಅವರವರ ಧರ್ಮದ ಮೇಲೆ ಅವರಿಗೆ ಪ್ರೀತಿ ಇರುತ್ತದೆ. ಹೀಗಾಗಿ ನಾವೆಲ್ಲರೂ ಭಾರತೀಯರು ಎನ್ನುವುದನ್ನು ನಾವು ಹೇಳುತ್ತೇವೆ’ ಎಂದರು.

ADVERTISEMENT

‘ದೇವಾಲಯಕ್ಕೆ ಹೋದರೆ ಹುಂಡಿಗೆ ಹಣ ಹಾಕುತ್ತೇವೆ. ಅಂತೆಯೇ ದೇಣಿಗೆ ನೀಡುತ್ತೇವೆ ಆದರೆ ಬಿಜೆಪಿಯವರು ಮಾಡುವ ಕೆಲಸಕ್ಕೆ ಯಾವುದೇ ಕಾರಣಕ್ಕೂ ಪ್ರೋತ್ಸಾಹ, ಸಹಕಾರ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಹಿಂದ ಬೇಕಿಲ್ಲ: ‘ಕಾಂಗ್ರೆಸ್ ಪಕ್ಷವೇ ಅಹಿಂದ. ಹೊಸ ಅಹಿಂದ ಬೇಕಾಗಿಲ್ಲ. ಬಿಜೆಪಿಯಿಂದ ಈಗಾಗಲೇ ಸಾಕಷ್ಟು ಅನಾಹುತಗಳಾಗಿವೆ. ಯಾವ ಸಮಾಜದವರನ್ನೂ ನೆಮ್ಮದಿಯಾಗಿರಲು ಅವರು ಬಿಟ್ಟಿಲ್ಲ, ಹೀಗಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮುಂಚೂಣಿಯಲ್ಲಿ ನಿಂತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ಅವರು ರಾಹುಲ್‌ಗಾಂಧಿ ಅವರನ್ನು ಭೇಟಿಯಾಗಿರುವ ಸಂಗತಿ ಗೊತ್ತಿದೆ. ಆದರೆ, ಭೇಟಿಯ ಉದ್ದೇಶ ಏನೆಂದು ನನಗೆ ಗೊತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.