ADVERTISEMENT

ಕೋಲಾರ: ಮಕ್ಕಳ ಆಟೋಟಕ್ಕೆ ಕೋವಿಡ್‌ ಅಡ್ಡಿ- ಸಚಿವ ಬಿ.ಸಿ.ನಾಗೇಶ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 13:20 IST
Last Updated 22 ಜನವರಿ 2022, 13:20 IST
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕ್ಯಾಲೆಂಡರ್‌ ಅನ್ನು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೆಂಗಳೂರಿನಲ್ಲಿ ಶನಿವಾರ ಬಿಡುಗಡೆ ಮಾಡಿದರು
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕ್ಯಾಲೆಂಡರ್‌ ಅನ್ನು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೆಂಗಳೂರಿನಲ್ಲಿ ಶನಿವಾರ ಬಿಡುಗಡೆ ಮಾಡಿದರು   

ಕೋಲಾರ: ‘ಕೋವಿಡ್ ಮಹಾಮಾರಿಯು ರಾಜ್ಯದಲ್ಲಿ ಮಕ್ಕಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿದ್ದು, ಇದು ದೈಹಿಕ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ. ಮಕ್ಕಳ ಆಟೋಟಕ್ಕೆ ಅಡ್ಡಿಯಾಗಿದೆ’ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಶನಿವಾರ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮತನಾಡಿ, ‘ಕೋವಿಡ್ ಆತಂಕ ಶೀಘ್ರ ದೂರವಾಗಿ ಮತ್ತೆ ಶಾಲೆಗಳಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆ ಹೆಚ್ಚಲಿ’ ಎಂದು ಆಶಿಸಿದರು.

‘ಶಾಲೆಗಳಲ್ಲಿ ನಡೆಸುವ ವ್ಯಾಯಾಮ, ಕ್ರೀಡಾ ಚಟುವಟಿಕೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿವೆ. ಆದರೆ, ಈಗ ಕೋವಿಡ್ ಇದಕ್ಕೆ ಅಡ್ಡಿಯುಂಟು ಮಾಡಿದೆ. ಅಂತರ ಕಾಪಾಡಿಕೊಂಡು ನಡೆಸಬಹುದಾದ ಕ್ರೀಡೆಗಳನ್ನು ಮಾತ್ರ ನಡೆಸಿ. ಮಕ್ಕಳಲ್ಲಿ ಚೈತನ್ಯ ತುಂಬಿ’ ಎಂದು ಸಲಹೆ ನೀಡಿದರು.

ADVERTISEMENT

‘ದೈಹಿಕ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಸಚಿವರು, ಸಭಾಪತಿಗಳು, ವಿಧಾನ ಪರಿಷತ್ ಸದಸ್ಯರು ಸ್ಪಂದಿಸಬೇಕು. ಶೀಘ್ರವಾಗಿ ನಮ್ಮ ಬೇಡಿಕೆ ಈಡೇರಿಸಬೇಕು’ ಎಂದು ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ ಸಚಿವರಿಗೆ ಮನವಿ ಮಾಡಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸದಸ್ಯ ಪುಟ್ಟಣ್ಣ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವ ಸಲಹೆಗಾರ ಹಾಗೂ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಚಂದ್ರಶೇಖರ್, ಖಜಾಂಚಿ ಡಿ.ವಿ.ಬಾಲರಾಜ್, ಕಾರ್ಯಾಧ್ಯಕ್ಷ ಪಿ.ಡಿ.ಕಾಲವಾಡ, ಉಪಾಧ್ಯಕ್ಷ ಪ್ರಮೋದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.