ADVERTISEMENT

ಮಾರ್ಗಸೂಚಿ ಉಲ್ಲಂಘನೆ: ಅಧಿಕಾರಿಗಳ ಎಚ್ಚರಿಕೆ

ಜಿಲ್ಲಾ ಕೇಂದ್ರದಲ್ಲಿ ತಹಶೀಲ್ದಾರ್‌ ಶೋಭಿತಾ ನಗರ ಪ್ರದಕ್ಷಿಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 15:19 IST
Last Updated 23 ಏಪ್ರಿಲ್ 2021, 15:19 IST
ತಹಶೀಲ್ದಾರ್‌ ಶೋಭಿತಾ ಅವರು ಕೋಲಾರದಲ್ಲಿ ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿ ಕೋವಿಡ್‌ ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆ ಮಾಡಿದರು.
ತಹಶೀಲ್ದಾರ್‌ ಶೋಭಿತಾ ಅವರು ಕೋಲಾರದಲ್ಲಿ ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿ ಕೋವಿಡ್‌ ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆ ಮಾಡಿದರು.   

ಕೋಲಾರ: ಕೊರೊನಾ ಸೋಂಕಿನ ಹೆಚ್ಚಳದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿದ ತಹಶೀಲ್ದಾರ್‌ ಶೋಭಿತಾ ಹಾಗೂ ನಗರಸಭೆ ಆಯುಕ್ತ ಶ್ರೀಕಾಂತ್‌ ಅವರು ಸುರಕ್ಷತಾ ಮಾರ್ಗಸೂಚಿ ಪಾಲಿಸದವರಿಗೆ ಶಿಸ್ತುಕ್ರಮದ ಬಿಸಿ ಮುಟ್ಟಿಸಿದರು.

ಮಾಸ್ಕ್‌ ಧರಿಸದ ಮತ್ತು ಅಂತರ ಕಾಯ್ದುಕೊಳ್ಳದ ಜನರಿಗೆ ಅಧಿಕಾರಿಗಳು ಸ್ಥಳದಲ್ಲೇ ದಂಡ ವಿಧಿಸಿದರು. ಅಗತ್ಯ ವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದರು. ಹೊಸ ಬಸ್ ನಿಲ್ದಾಣ ಮತ್ತು ಟಿ.ಚನ್ನಯ್ಯ ಸಂತೆ ಮೈದಾನ ಮಾರುಕಟ್ಟೆಯಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಬಗ್ಗೆ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಜಾಗೃತಿ ಮೂಡಿಸಿದರು.

ಮಾಸ್ಕ್ ಹಾಕದೆ ಅಡ್ಡಾದಿಡ್ಡಿ ಓಡಾಡುತ್ತಿದ್ದವರನ್ನು ತಡೆದು ₹ 800 ದಂಡ ವಿಧಿಸಲಾಯಿತು. ಅಮ್ಮವಾರಿಪೇಟೆಯ ಅಂಗಡಿಯೊಂದರ ಮಾಲೀಕರಿಗೆ ₹ 300 ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು. ಪ್ರಮುಖ ವಾಣಿಜ್ಯ ಸ್ಥಳವಾದ ಎಂ.ಜಿ ರಸ್ತೆ, ದೊಡ್ಡಪೇಟೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ADVERTISEMENT

ಡೂಂಲೈಟ್ ವೃತ್ತದ ಉಡುಪಿ ಶ್ರೀಕೃಷ್ಣ ಹೋಟೆಲ್‌ನಲ್ಲಿ ಗ್ರಾಹಕರಿಗೆ ಆಹಾರ ಸೇವಿಸಲು ಅವಕಾಶ ನೀಡಿದ ಕಾರಣಕ್ಕೆ ಅಧಿಕಾರಿಗಳು ಮಾಲೀಕರಿಗೆ ₹ 3 ಸಾವಿರ ದಂಡ ವಿಧಿಸಿ, ಪಾರ್ಸಲ್‌ ಮಾತ್ರ ಕೊಡುವಂತೆ ಖಡಕ್‌ ಎಚ್ಚರಿಕೆ ನೀಡಿದರು.

ಭಾಗಶಃ ಲಾಕ್‌ಡೌನ್‌: ‘ಕೋವಿಡ್‌ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಎಲ್ಲೆಡೆ ಭಾಗಶಃ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ನಗರದಲ್ಲಿ ಶೇ 90ರಷ್ಟು ಮಂದಿ ಮಾಸ್ಕ್ ಧರಿಸಿ ಕೋವಿಡ್‌ ಮಾರ್ಗಸೂಚಿ ಪಾಲಿಸುತ್ತಿದ್ದಾರೆ. ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ ದಂಡ ವಿಧಿಸುತ್ತಿದ್ದೇವೆ. ಮಾರ್ಗಸೂಚಿ ಪಾಲಿಸದ ಅಂಗಡಿ, ಹೋಟೆಲ್ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ತಹಶೀಲ್ದಾರ್‌ ಶೋಭಿತಾ ಹೇಳಿದರು.

‘ಕೋವಿಡ್‌ ತಡೆಗೆ ಸಾರ್ವಜನಿಕರು ಸಹಕರಿಸಬೇಕು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಅಂಗಡಿಗಳನ್ನು ತೆರೆದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ತಿಳಿಸಿದರು.

ಮಾಸ್ಕ್ ವಿತರಣೆ: ನಗರದ ಕನಕನಪಾಳ್ಯದ ಬೇಕರಿ ಮಾಲೀಕರೊಬ್ಬರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್‌ ವಿತರಿಸಿದ ಆಯುಕ್ತ ಶ್ರೀಕಾಂತ್‌, ‘ನಗರದಲ್ಲಿ ದಿನದಿಂದ ದಿನಕ್ಕೆ ಕೊರಿನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ತಮ್ಮ ಜೀವ ಉಳಿಸಿಕೊಳ್ಳುವುದರ ಜತೆಗೆ ಇತರರ ಪ್ರಾಣ ರಕ್ಷಣೆ ಮಾಡಬೇಕು’ ಎಂದು ಮನವಿ ಮಾಡಿದರು.

ನಗರಸಭೆ ಕಂದಾಯ ಅಧಿಕಾರಿ ಚಂದ್ರು, ಪರಿಸರ ಎಂಜಿನಿಯರ್‌ ಪುನೀತ್‌, ಕಂದಾಯ ನಿರೀಕ್ಷಕ ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.