ADVERTISEMENT

ಕೋವಿಡ್‌: ರೊಟೇಷನ್‍ ಪದ್ಧತಿಗೆ ಮನವಿ

ಸರ್ಕಾರದ ಸ್ಪಂದನೆ ಸಿಕ್ಕಿದೆ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್‌ಬಾಬು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 13:39 IST
Last Updated 18 ಏಪ್ರಿಲ್ 2021, 13:39 IST
ಜಿ.ಸುರೇಶ್‌ಬಾಬು
ಜಿ.ಸುರೇಶ್‌ಬಾಬು   

ಕೋಲಾರ: ಕೋವಿಡ್‌ 2ನೇ ಅಲೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ಕಚೇರಿಗಳಲ್ಲೂ ರೊಟೇಷನ್ ಪದ್ಧತಿ ಅನುಸರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಮನವಿಗೆ ಸರ್ಕಾರದ ಸೂಕ್ತ ಸ್ಪಂದನೆ ಸಿಕ್ಕಿದ್ದು, ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ರೊಟೇಷನ್‌ ಪದ್ಧತಿ ಶೀಘ್ರವೇ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕೊರೊನಾ ಸೋಂಕು ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಸರ್ಕಾರದ ಈ ಕಾರ್ಯದಲ್ಲಿ ನೌಕರರು ಹಗಲಿರುಳು ಶ್ರಮಿಸಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೆಲಸ ಮಾಡುತ್ತಿದ್ದಾರೆ. ಸೋಂಕಿನ ತೀವ್ರತೆ ಹಿನ್ನಲೆಯಲ್ಲಿ ನೌಕರರ ಕುಟುಂಬ ವರ್ಗದಲ್ಲಿ ಆತಂಕ ಮೂಡಿರುವುದರಿಂದ ರಾಜ್ಯ ಸರ್ಕಾರ ಕೇಂದ್ರದ ಮಾದರಿಯಲ್ಲಿ ರೊಟೇಷನ್ ಪದ್ಧತಿ ಜಾರಿಗೆ ತರುವುದು ಸೂಕ್ತ ಎಂದು ಹೇಳಿದ್ದಾರೆ.

ADVERTISEMENT

ರೊಟೇಷನ್‌ ಪದ್ಧತಿಗೆ ಸರ್ಕಾರ ಸಮ್ಮತಿಸಿದರೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಇಲಾಖಾ ಮುಖ್ಯಸ್ಥರು ಶೇ 50 ಮತ್ತು ಶೇ 33 ಅನುಪಾತ ಅನುಸರಿಸಿ ನೌಕರರು ಕಚೇರಿಗೆ ರೋಟೇಷನ್ ಆಧಾರದಲ್ಲಿ ಹಾಜರಾಗಲು ಅವಕಾಶ ಕಲ್ಪಿಸುತ್ತಾರೆ. ಗರ್ಭಿಣಿ ನೌಕರರಿಗೆ ಹಾಗೂ 55 ವರ್ಷ ವಯೋಮಿತಿ ಮೀರಿ ಅನಾರೋಗ್ಯದಿಂದ ಬಳಲುತ್ತಿರುವ ನೌಕರರಿಗೆ ಹಾಜರಾತಿಯಿಂದ ವಿನಾಯಿತಿ ನೀಡಿ ಮನೆಯಿಂದಲೇ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶಿಕ್ಷಕರ ವರ್ಗಾವಣೆ: ಶಿಕ್ಷಕರ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ಸಂಬಂಧ ಚರ್ಚಿಸಿ ಶೀಘ್ರವೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸುಗ್ರೀವಾಜ್ಞೆ ತರುವ ನಿಟ್ಟಿನಲ್ಲಿ ಏ.19ರಂದು ಸಚಿವ ಸಂಪುಟದಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ, ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಚರ್ಚೆ ವಿಳಂಬವಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಹೊಸ ಬೈಲಾ ಸಿದ್ಧವಾಗಿದ್ದು, ಹೊಸ ಬೈಲಾ ಏ.15ರಿಂದಲೇ ಜಾರಿಗೆ ಬಂದಿದೆ. ಬೈಲಾದಲ್ಲಿ ಸಂಘದ ಚುನಾವಣೆ ಪ್ರಕ್ರಿಯೆಯಿಂದ ಶಿಸ್ತು, ಆರ್ಥಿಕ ಭ್ರಷ್ಟತೆಗೆ ತಡೆ ಸೇರಿದಂತೆ ಎಲ್ಲಾ ಅಗತ್ಯ ತಿದ್ದುಪಡಿ ತರಲಾಗಿದೆ. 196 ಪುಟಗಳ ಬೈಲಾ ಅನುಮೋದಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಸಂಕಷ್ಟ ದೂರವಾದ ನಂತರ ನೌಕರರ ದಿನಾಚರಣೆ ನಡೆಸಲು ತೀರ್ಮಾನಿಸಲಾಗಿದೆ. ನೌಕರರಿಗೆ ನೀಡಬೇಕಾದ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಕೊರೊನಾ ವಾರಿಯರ್ಸ್ ಆಗಿ ಮಾಡಿದ ಅತ್ಯುತ್ತಮ ಸೇವೆಯನ್ನು ಆದ್ಯತೆ ಮೇಲೆ ಪರಿಗಣಿಸುವಂತೆ ಸಂಘ ಮನವಿ ಮಾಡಿದೆ. ಜತೆಗೆ ಉತ್ತಮ ನೌಕರರನ್ನು ಗುರುತಿಸಿ ಪುರಸ್ಕರಿಸಲು ಕೋರಲಾಗಿದೆ ಎಂದು ವಿವರಿಸಿದ್ದಾರೆ.

ಚಿಕಿತ್ಸೆಗೆ ರೂಪುರೇಷೆ: ರಾಜ್ಯ ಸರ್ಕಾರ ಈಗಾಗಲೇ ಏ.1ರಿಂದಲೇ ನೌಕರರಿಗೆ ನಗದುರಹಿತ ಚಿಕಿತ್ಸೆ ಜಾರಿಗೆ ತಂದಿದೆ. ಇದಕ್ಕೆ ಸಂಬಂಧಪಟ್ಟ ರೂಪುರೇಷೆಗಳನ್ನು ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರವೇ ಈ ಕೆಲಸ ಮುಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ನೌಕರರ ಸಮಸ್ಯೆಗಳ ಕುರಿತು ಚರ್ಚಿಸಲು ಜಂಟಿ ಸಮಾಲೋಚನಾ ಸಮಿತಿ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುತ್ತದೆ. ಅದಕ್ಕೂ ಮುನ್ನ ಇಲಾಖಾವಾರು ಸಮಸ್ಯೆಗಳನ್ನು ವೃಂದ ಸಂಘಗಳ ಪದಾಧಿಕಾರಿಗಳು ಜಿಲ್ಲಾ ಸಂಘಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.