ADVERTISEMENT

ಕೋಲಾರ: ದಿನಕ್ಕೆ 2,100 ಮಂದಿಗೆ ಕೋವಿಡ್‌ ಪರೀಕ್ಷೆ

ಜಿಲ್ಲೆಯಲ್ಲಿ ಓಮೈಕ್ರಾನ್‌ ಪ್ರಕರಣ ಪತ್ತೆಯಾಗಿಲ್ಲ: ಡಿಎಚ್‌ಒ ಜಗದೀಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 12:57 IST
Last Updated 6 ಜನವರಿ 2022, 12:57 IST
ಡಾ.ಜಗದೀಶ್‌
ಡಾ.ಜಗದೀಶ್‌   

ಕೋಲಾರ: ‘ಇಲಾಖೆಯು ಜಿಲ್ಲೆಯಲ್ಲಿ ದಿನಕ್ಕೆ 2,100 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡುವ ಗುರಿ ನೀಡಿದ್ದು, ಪರೀಕ್ಷೆ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ ಈವರೆಗೆ ಓಮೈಕ್ರಾನ್‌ ಪ್ರಕರಣ ಪತ್ತೆಯಾಗಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸೋಂಕಿತರ ಪೈಕಿ 350 ಮಂದಿಯ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ 125 ಮಾದರಿಗಳ ವರದಿ ಬಂದಿಲ್ಲ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳವಾಗಿದೆ. ಜನರು ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಿಕೊಳ್ಳದಿರುವುದು, ಮಾಸ್ಕ್ ಧರಿಸದಿರುವುದು ಇದಕ್ಕೆ ಮುಖ್ಯ ಕಾರಣ. ಜನರು ನಿರ್ಲಕ್ಷ್ಯ ತೋರಿದರೆ ಸೋಂಕು ಹರಡುವಿಕೆ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಿಗೂ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಜನರ ಮಾಸ್ಕ್‌ ಧರಿಸುವುದರ ಜತೆಗೆ ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆಯಬೇಕು. ಕೈಗಳನ್ನು ಸ್ವಚ್ಛಗೊಳಿಸಲು ಆಗಾಗ್ಗೆ ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಕೋವಿಡ್‌ 3ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ.ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳು ಸನ್ನದ್ಧ ಸ್ಥಿತಿಯಲ್ಲಿವೆ. ಜಿಲ್ಲೆಯಲ್ಲಿ ಸದ್ಯ 71 ಸಕ್ರಿಯ ಸೋಂಕಿನ ಪ್ರಕರಣಗಳಿದ್ದು, ಇಬ್ಬರು ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ.ಉಳಿದವರು ಮನೆಯಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ವಿವರಿಸಿದರು.

ಶೇ 2.4ಕ್ಕೆ ಹೆಚ್ಚಳ: ‘ಜಿಲ್ಲೆ ಮಾತ್ರವಲ್ಲದೆ ದೇಶದೆಲ್ಲೆಡೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಗುರುವಾರ ಶೇ 2.4ಕ್ಕೆ ಹೆಚ್ಚಳವಾಗಿದೆ. ಕೋವಿಡ್ ಪರೀಕ್ಷೆ ಹೆಚ್ಚಳವಾದಂತೆ ಸೋಂಕಿತರ ಸಂಖ್ಯೆಯು ಏರು ಗತಿಯಲ್ಲಿ ಸಾಗಿದೆ. ಮುಖ್ಯವಾಗಿ ಹೊರ ರಾಜ್ಯಗಳಿಗೆ ಹೋಗಿ ಬರುವವರಲ್ಲಿ ಸೋಂಕು ಕಾಣಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಶಬರಿಮಲೆ, ಓಂಶಕ್ತಿ ದೇವಾಲಯಕ್ಕೆ ಹೋಗಿ ಬರುವವರ ವಿಚಾರದಲ್ಲಿ ಸರ್ಕಾರದ ಕೋವಿಡ್‌ ಮಾರ್ಗಸೂಚಿ ಅನ್ವಯ ಕೆಲಸ ಮಾಡಬೇಕಿದೆ. ಸರ್ಕಾರದ ಸೂಚನೆಗಳನ್ನು ಪಾಲಿಸಲು ನಾವು ಸಿದ್ಧವಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.