ADVERTISEMENT

ಕೋವಿಡ್‌ ಲಸಿಕೆ ವಿತರಣೆ: ಐತಿಹಾಸಿಕ ದಿನ ಎಂದ ಸಂಸದ ಮುನಿಸ್ವಾಮಿ

ಜಿಲ್ಲಾ ಕೇಂದ್ರದಲ್ಲಿ ಲಸಿಕೆ ಪರಿಶೀಲನೆ ಬಳಿಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 13:51 IST
Last Updated 15 ಜನವರಿ 2021, 13:51 IST

ಕೋಲಾರ: ‘ಕಳೆದೊಂದು ವರ್ಷದಿಂದ ಜನರನ್ನು ಕಾಡುತ್ತಿದ್ದ ಕೋವಿಡ್-19 ನಿರ್ಮೂಲನೆಗೆ ದೇಶದಲ್ಲಿ ಲಸಿಕೆ ಸಂಶೋಧಿಸಿದ್ದು, ಪ್ರಧಾನಿ ಮೋದಿಯವರು ಕೊರೊನಾ ನಿರ್ಮೂಲನಾ ಅಭಿಯಾನಕ್ಕೆ ಶನಿವಾರ (ಜ.16) ಬೆಳಿಗ್ಗೆ ದೆಹಲಿಯಲ್ಲಿ ಚಾಲನೆ ನೀಡುತ್ತಾರೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ಜಿಲ್ಲೆಗೆ ಪೂರೈಕೆಯಾಗಿರುವ ಕೋವಿಡ್‌ ಲಸಿಕೆಯನ್ನು ಇಲ್ಲಿ ಶುಕ್ರವಾರ ಪರಿಶೀಲಿಸಿ ಮಾತನಾಡಿ, ‘ಕೋವಿಡ್‌ ಲಸಿಕೆ ವಿತರಣೆಯಾಗಲಿರುವ ಶನಿವಾರವು ಐತಿಹಾಸಿಕ ದಿನವಾಗಿ ದಾಖಲಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಲಸಿಕೆ ಸಂಶೋಧಿಸಲು ಹೆಚ್ಚಿನ ಪ್ರೋತ್ಸಾಹ ನೀಡಿದ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಪ್ರಗತಿ ಸಾಧಿಸಿದ್ದು, ವಿದೇಶಿಯರನ್ನು ಹಿಮ್ಮೆಟ್ಟಿಸಿ ಲಸಿಕೆ ಸಂಶೋಧಿಸಿದ್ದಾರೆ. ಭಾರತದ ಲಸಿಕೆಗೆ ವಿದೇಶದಲ್ಲೂ ಹೆಚ್ಚಿನ ಬೇಡಿಕೆಯಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಲಸಿಕೆ ವಿತರಣೆಗೆ ಚಾಲನೆ ನೀಡುತ್ತಾರೆ. ಏಕ ಕಾಲದಲ್ಲಿ ಜಿಲ್ಲೆಗಳಲ್ಲೂ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಡಿ ದರ್ಜೆ ನೌಕರರು. ನರ್ಸ್‌ಗಳು, ವೈದ್ಯರು. ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲಾ ಕೊರೊನಾ ವಾರಿಯರ್ಸ್‌ಗಳಿಗೆ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತದೆ’ ಎಂದು ವಿವರಿಸಿದರು.

‘ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯಂತೆ 2 ಸಾವಿರ ಲಸಿಕೆ ಮೀಸಲಿಡಲಾಗುವುದು. ಇದರಲ್ಲಿ ಪ್ರಥಮವಾಗಿ ಹೆಸರು ನೋಂದಾಯಿಸಿದವರೆಗೆ ಲಸಿಕೆ ನೀಡಲಾಗುವುದು. ಯಾವುದೇ ಶಿಫಾರಸ್ಸಿಗೆ ಅವಕಾಶವಿಲ್ಲ’ ಎಂದು ಸ್ವಷ್ಟಪಡಿಸಿದರು.

ಕೊರೊನಾ ಮುಕ್ತವಾಗಿಸಿ: ‘ಎಲ್ಲಾ ವೈದ್ಯರು ಒಗ್ಗೂಡಿ ಜಿಲ್ಲೆಯನ್ನು ಕೊರೊನಾ ಮುಕ್ತವಾಗಿಸಿ ಮಾದರಿ ಜಿಲ್ಲೆಯಾಗಿ ಮಾಡಬೇಕು. ಎಲ್ಲರ ಪರಿಶ್ರಮದಿಂದ ಕೋವಿಡ್‌ ಲಸಿಕೆ ಸಂಶೋಧನೆ ಯಶಸ್ವಿಯಾಗಿದ್ದು ದೇಶವು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಿದೆ. ಕೋವಿಡ್‌ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಜನರು ಲಸಿಕೆ ವಿಚಾರವಾಗಿ ವದಂತಿಗೆ ಕಿವಿಗೊಡಬಾರದು. ಲಸಿಕೆ ವಿತರಣೆಗೆ ಎಲ್ಲರ ಸಹಕಾರ ಅಗತ್ಯ’ ಎಂದು ಕೋರಿದರು.

ಜನರ ಸಹಕಾರ: ‘ಜಿಲ್ಲೆಯ ಜನರು ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಜಿಲ್ಲೆಯಲ್ಲಿ ಜನರ ಸಹಕಾರದಿಂದ 8 ತಿಂಗಳಿಂದಲೂ ಕೊರೊನಾ ಸೋಂಕು ಹತೋಟಿಯಲ್ಲಿದೆ. ಇದೀಗ ಜಿಲ್ಲೆಗೆ ಕೊರೊನಾ ಲಸಿಕೆ ಪೂರೈಕೆಯಾಗಿರುವುದು ಸಂತಸದ ವಿಚಾರ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ಹೇಳಿದರು.

ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ, ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ.ಕಮಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.