ADVERTISEMENT

ಕೋವಿಡ್‌ ನಿಯಂತ್ರಣದಲ್ಲಿ ಮಾಧ್ಯಮ ನಿರ್ಣಾಯಕ: ಸಂಸದ ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಮೇ 2021, 12:58 IST
Last Updated 15 ಮೇ 2021, 12:58 IST
ಕೋಲಾರದಲ್ಲಿ ಶನಿವಾರ ಪತ್ರಕರ್ತರಿಗೆ ಆರೋಗ್ಯ ಇಲಾಖೆಯಿಂದ ಕೋವಿಡ್‌ ಲಸಿಕೆ ಹಾಕಲಾಯಿತು.
ಕೋಲಾರದಲ್ಲಿ ಶನಿವಾರ ಪತ್ರಕರ್ತರಿಗೆ ಆರೋಗ್ಯ ಇಲಾಖೆಯಿಂದ ಕೋವಿಡ್‌ ಲಸಿಕೆ ಹಾಕಲಾಯಿತು.   

ಕೋಲಾರ: ‘ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಧ್ಯಮವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಜೀವದ ಹಂಗು ತೊರೆದು ಸಮಾಜಕ್ಕೆ ಕ್ಷಣಕ್ಷಣದ ಸುದ್ದಿ ನೀಡುವ ಪತ್ರಕರ್ತರೂ ಸಹ ಕೊರೊನಾ ವಾರಿಯರ್ಸ್‌’ ಎಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಇಲ್ಲಿ ಶನಿವಾರ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಕೋವಿಡ್ ಲಸಿಕೆ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

‘ಪತ್ರಕರ್ತರು ಕಾರ್ಯ ಒತ್ತಡದ ನಡುವೆ ಆರೋಗ್ಯ ನಿರ್ಲಕ್ಷಿಸಬಾರದು. ಕೋವಿಡ್ ವಿರುದ್ಧ ಹೋರಾಡುವವರಿಗೆ ಆತ್ಮಸ್ಥೈರ್ಯ ತುಂಬುವ ರೀತಿಯಲ್ಲಿ ಸುದ್ದಿಗಳನ್ನು ಮಾಡಬೇಕು. ಸರ್ಕಾರ ಕೊರೊನಾ ಸೋಂಕು ತಡೆಗೆ ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಮಾಧ್ಯಮದ ಸಹಕಾರ ಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸುವಲ್ಲಿ ಮಾಧ್ಯಮಗಳು ಕಾಲಕಾಲಕ್ಕೆ ಸುದ್ದಿ ಪ್ರಸಾರ ಮಾಡಿ ಜಿಲ್ಲಾಡಳಿತವನ್ನು ಎಚ್ಚರಿಸುವ ಕೆಲಸ ಮಾಡಿವೆ. ಸರ್ಕಾರ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ವೈದ್ಯಕೀಯ ಆಮ್ಲಜನಕ ಪೂರೈಸುತ್ತಿದೆ’ ಎಂದು ಮಾಹಿತಿ ನೀಡಿದರು.

‘ಮಾಧ್ಯಮಗಳು ಕೇವಲ ಋಣಾತ್ಮಕ ಸುದ್ದಿಗಳಿಂದ ಜನರಲ್ಲಿ ಭಯ ಮೂಡಿಸಬಾರದು. ಜನರು ಕೋವಿಡ್‌ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ದಿನದಿಂದ ದಿನಕ್ಕೆ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಈ ಸಂಗತಿಯನ್ನು ಮಾಧ್ಯಮಗಳು ಜನರಿಗೆ ತಿಳಿಸಿ ಧೈರ್ಯ ತುಂಬಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಕಿವಿಮಾತು ಹೇಳಿದರು.

ಆತಂಕಕಾರಿ ಬೆಳವಣಿಗೆ: ‘ಕೊರೊನಾ ಸೋಂಕು ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಗ್ರಾಮೀಣ ಭಾಗದ ಜನರೂ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಮನೆಯಿಂದ ಅನಗತ್ಯವಾಗಿ ಹೊರಬಂದು ಓಡಾಡಬಾರದು. ಕೋವಿಡ್‌ ನಿಯಂತ್ರಣಕ್ಕೆ ಜನರು ಸರ್ಕಾರದ ಜತೆ ಕೈಜೋಡಿಸಬೇಕು’ ಎಂದು ಕೋರಿದರು.

‘ಪತ್ರಕರ್ತರು ಕೊರೊನಾ ವಾರಿಯರ್ಸ್‌ ರೀತಿ ಕೆಲಸ ಮಾಡುತ್ತಿದ್ದಾರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಪರೀಶಿಲಿಸುವಾಗ ಪತ್ರಕರ್ತರು ಅಷ್ಟೇ ಮುತುವರ್ಜಿಯಿಂದ ಜತೆಗಿದ್ದು, ಆಸ್ಪತ್ರೆಗಳ ಸ್ಥಿತಿಗತಿ ಬಗ್ಗೆ ಸಮಾಜಕ್ಕೆ ಮಾಹಿತಿ ನೀಡುತ್ತಿದ್ದಾರೆ’ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸರ್ಕಾರವು ಪತ್ರಕರ್ತರನ್ನೂ ಕೋವಿಡ್ ನಿರ್ಮೂಲನಾ ಕಾರ್ಯದಲ್ಲಿ ಪರಿಗಣಿಸಿ ಲಸಿಕೆ ನೀಡುವಂತೆ ಆದೇಶಿಸಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಎಲ್ಲಾ ಪತ್ರಕರ್ತರು ಲಸಿಕೆ ಪಡೆಯಬೇಕು’ ಎಂದರು.

ಅಭಿಯಾನದಲ್ಲಿ 230 ಪರ್ತಕರ್ತರಿಗೆ ಲಸಿಕೆ ಹಾಕಲಾಯಿತು. ತಹಶೀಲ್ದಾರ್ ಶೋಭಿತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ನಗರಸಭೆ ಆಯುಕ್ತ ಶ್ರೀಕಾಂತ್, ದರ್ಗಾ ಮೊಹಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.