ADVERTISEMENT

ಶೋಷಣೆಗೊಳಗಾದವರ ಪರ ಹೋರಾಟ: ಸಾತಿ ಸುಂದರೇಶ್‌

ಸಿಪಿಐ ಜಿಲ್ಲಾ ಸಮ್ಮೇಳನದಲ್ಲಿ ಸಾತಿ ಸುಂದರೇಶ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 4:29 IST
Last Updated 19 ಸೆಪ್ಟೆಂಬರ್ 2022, 4:29 IST
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿ ಸಿಪಿಐ ಕಾರ್ಯಕರ್ತರು ಜಿಲ್ಲಾ ಸಮ್ಮೇಳನದ ಅಂಗವಾಗಿ ಮೆರವಣಿಗೆ ನಡೆಸಿದರು
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿ ಸಿಪಿಐ ಕಾರ್ಯಕರ್ತರು ಜಿಲ್ಲಾ ಸಮ್ಮೇಳನದ ಅಂಗವಾಗಿ ಮೆರವಣಿಗೆ ನಡೆಸಿದರು   

ಕೆಜಿಎಫ್‌: ‘ನಿರುದ್ಯೋಗ, ಪರಿಶಿಷ್ಟರ ಮೇಲೆ ದೌರ್ಜನ್ಯ, ನಿವೇಶನ ಮತ್ತು ವಸತಿ ಸಮಸ್ಯೆ, ರೈತರ ಅಳಲು, ಖಾಸಗೀಕರಣ ಮೊದಲಾದ ಸಮಸ್ಯೆಗಳನ್ನು ನಿವಾರಿಸಲು ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು. ಶೋಷಣೆಗೆ ಒಳಗಾದ ಎಲ್ಲರ ಪರವಾಗಿ ಹೋರಾಟ ಮಾಡುವುದು ಸಿಪಿಐನ ಗುರಿ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಹೇಳಿದರು.

ರಾಬರ್ಟ್‌ಸನ್‌ಪೇಟೆಯಲ್ಲಿ ಭಾನುವಾರ ನಡೆದ ಸಿಪಿಐ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿ, ‘ಭೂಮಿಯ ಸಮ ಹಂಚಿಕೆಯಾಗಬೇಕು. ಸರ್ಕಾರಿ ಶಾಲೆಗಳ ಸಬಲೀಕರಣವಾಗಬೇಕು. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಕೈಗೆತ್ತಿಕೊಂಡು, ಅವುಗಳನ್ನು ಬಗೆಹರಿಸುವ ಬಗ್ಗೆ ಪರ್ಯಾಯ ಪಕ್ಷವಾಗಿ ಕೆಲಸ ಮಾಡಬೇಕಾಗಿದೆ’ ಎಂದರು.

‘ಸಂಪತ್ತನ್ನು ಸಮನಾಗಿ ಹಂಚಬೇಕು ಎಂಬುದು ಪಕ್ಷದ ಸಿದ್ಧಾಂತವಾಗಿದೆ. ಸಹಕಾರಿ ವ್ಯವಸ್ಥೆಯೊಳಗೆ ಜನರಿಗೆ ಸಂಪತ್ತನ್ನು ಹಂಚಿ ಸಮಾನತೆಯನ್ನು ಬೆಳೆಸಬೇಕು. ಕೋಲಾರ ಜಿಲ್ಲೆಯಲ್ಲಿ ಮೊದಲ ಶಾಸಕರನ್ನು ಕೊಟ್ಟಿದ್ದು, ಕೆಜಿಎಫ್‌ ಕ್ಷೇತ್ರದಲ್ಲಿಯೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಡೀ ದೇಶದಲ್ಲಿ ಬಲಪಂಥೀಯ ಸರ್ಕಾರವನ್ನು ಎದುರಿಸಲು ಕಮ್ಯೂನಿಷ್ಟ್‌ ಪಕ್ಷಗಳ ಬಲವರ್ಧನೆಯಾಗಬೇಕು. ಪಕ್ಷದ ಬಗ್ಗೆ ಒಲವಿದ್ದು, ನಿರ್ಲಿಪ್ತರಾಗಿರುವ ಕಾರ್ಯಕರ್ತರನ್ನು ಎಚ್ಚರಿಸುವ ಕೆಲಸ ಆಗಬೇಕು’ ಎಂದು ಸುಂದರೇಶ್‌ ಹೇಳಿದರು.

ADVERTISEMENT

‘ಸಿಪಿಐ ಪಕ್ಷದಲ್ಲಿ ಪಕ್ಷ ಕಟ್ಟುವುದು ಮೊದಲ ಆದ್ಯತೆ. ನಾವು ಚುನಾವಣೆಯಲ್ಲಿ ಎಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆಯೋ ಅಲ್ಲಿ ಜಿಲ್ಲಾ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸುತ್ತದೆ. ನಂತರ ಕೇಂದ್ರ ಸಮಿತಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಕಾರ್ಯಕಾರಣಿ ಪರಿಷತ್‌ ಸದಸ್ಯ ಸಿ.ಮಹೇಂದ್ರನ್‌, ಎಐವೈಎಫ್‌ ರಾಜ್ಯ ಘಟಕದ ಅಧ್ಯಕ್ಷ ಹರೀಶ್‌ ಬಾಲ, ಮುಖಂಡ ಜ್ಯೋತಿಬಸು, ಆರ್.ಶಿವಕುಮಾರ್‌, ಎ.ಅಂತುರಾಜ್‌, ವಿಕ್ರಮ್, ರಂಜಿತ್‌ಕುಮಾರ್, ಎಸ್‌.ಎಸ್‌.ಮೂರ್ತಿ, ರಗದೇವ, ಜಗನ್ನಾಥನ್‌ ಇದ್ದರು.

ಕಾರ್ಯಕರ್ತರು ಊರಿಗಾಂನಿಂದ ರಾಬರ್ಟ್‌ಸನ್‌ಪೇಟೆಯ ಕಿಂಗ್‌ಜಾರ್ಜ್ ಹಾಲ್‌ವರೆಗೆ ಮೆರವಣಿಗೆ
ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.