ಕೆಜಿಎಫ್: ರಾಬರ್ಟಸನ್‌ಪೇಟೆಯ ಕಿಂಗ್ ಜಾರ್ಜ್ ಸಭಾಂಗಣದಲ್ಲಿ ಭಾನುವಾರ ನಡೆದ ಸಿಪಿಐ ತಾಲ್ಲೂಕು ಸಮ್ಮೇಳನದಲ್ಲಿ ‘ಸೂರಿಗಾಗಿ ಸಮರ’ ಎಂಬ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ತಾಲ್ಲೂಕಿನಲ್ಲಿ ನಿವೇಶನ ಹಾಗೂ ಮನೆ ಇಲ್ಲದವರಿಗೆ ಸೂರು ಒದಗಿಸಬೇಕಾಗಿದೆ. ಬಿಜಿಎಂಎಲ್ ಪ್ರದೇಶದಲ್ಲಿ ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ಅವರಿಗೆ ನೀಡಬೇಕು. ಈ ವಿಷಯವಾಗಿ ನ್ಯಾಯಾಲಯದ ತೀರ್ಪನ್ನು ಕೂಡ ಸರ್ಕಾರ ಪಾಲಿಸುತ್ತಿಲ್ಲ. ಆದ್ದರಿಂದ ಸೂರಿಗಾಗಿ ಸಮರ ಎಂಬ ಧ್ಯೇಯ ವಾಕ್ಯದೊಡನೆ ಹೋರಾಟ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಘಟಕದ ಕಾರ್ಯದರ್ಶಿ ಜ್ಯೋತಿ ಬಸು ತಿಳಿಸಿದರು
ಬೆಮಲ್ ಗುತ್ತಿಗೆ ಕಾರ್ಮಿಕರು ಬೇಡಿಕೆ ಈಡೇರಿಕೆಗಾಗಿ 26 ದಿನ ಹೋರಾಟ ನಡೆಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಬೆಮಲ್ ಆಡಳಿತ ವರ್ಗ ತನ್ನ ವಾಗ್ದಾನವನ್ನು ಈಡೇರಿಸಿಲ್ಲ. ಹಾಗಾಗಿ ಸಿಪಿಐ ಕಾರ್ಮಿಕರ ಪರವಾಗಿ ಹೋರಾಟವನ್ನು ಮುಂದುವರಿಸುವುದು ಎಂದರು.
ರಾಬರ್ಟ್‌ಸನ್ ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕಾಯಕಲ್ಪ ಬೇಕಾಗಿದೆ. ರೋಗಿಗಳಿಗೆ ಕನಿಷ್ಠ ಸೌಲಭ್ಯ ಸಿಗುತ್ತಿಲ್ಲ. ತಜ್ಞ ವೈದ್ಯರ ಚಿಕಿತ್ಸೆ ದೊರೆಯುತ್ತಿಲ್ಲ. ಈ ವಿಚಾರವಾಗಿ ಸಿಪಿಐ ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸುತ್ತದೆ ಎಂದು ತಿಳಿಸಿದರು.
ನಗರಸಭೆಯಲ್ಲಿ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ. ಕಳೆದ ಐದು ವರ್ಷದಿಂದ ನಗರದ 35 ವಾರ್ಡ್‌ಗಳಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಒಂದೂವರೆ ಕೋಟಿ ಖರ್ಚು ಮಾಡಲಾಗಿದೆ. ಎಲ್ಲಿ ಕೂಡ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಆಗಸ್ಟ್ 17ರಂದು ಬೆಂಬಲ ನಗರದಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಈ ವೇಳೆ ತಾಲ್ಲೂಕು ಕಾರ್ಯದರ್ಶಿಯಾಗಿ ಶ್ರೀಕುಮಾರ್, ಸಹಾಯಕ ಕಾರ್ಯದರ್ಶಿಯಾಗಿ ರಣದೀವ್ ಹಾಗೂ ಖಜಾಂಚಿಯಾಗಿ ಮಾದೇಶ್ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.