ADVERTISEMENT

‘ಕಾಡಾನೆ ದಾಳಿ ತಡೆಗೆ ತಂಡ ರಚಿಸಿ’

ಅರಣ್ಯ ಇಲಾಖೆಗೆ ರೈತ ಸಂಘ ಮನವಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 3:49 IST
Last Updated 6 ಜನವರಿ 2022, 3:49 IST
ಬಂಗಾರಪೇಟೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಕಾಡಾನೆ ದಾಳಿ ತಡೆಗೆ ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿ ವಲಯ ಅರಣ್ಯಾಧಿಕಾರಿ ಕಚೇರಿಯ ವ್ಯವಸ್ಥಾಪಕ ಶ್ರೀನಿವಾಸನ್ ಅವರಿಗೆ ಮನವಿ ಸಲ್ಲಿಸಿದರು
ಬಂಗಾರಪೇಟೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಕಾಡಾನೆ ದಾಳಿ ತಡೆಗೆ ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿ ವಲಯ ಅರಣ್ಯಾಧಿಕಾರಿ ಕಚೇರಿಯ ವ್ಯವಸ್ಥಾಪಕ ಶ್ರೀನಿವಾಸನ್ ಅವರಿಗೆ ಮನವಿ ಸಲ್ಲಿಸಿದರು   

ಬಂಗಾರಪೇಟೆ: ಗಡಿ ಭಾಗದಲ್ಲಿ ಕಾಡಾನೆ ದಾಳಿ ತಡೆಗೆ ವಿಶೇಷ ತಂಡ ರಚಿಸಿ ಆನೆ ದಾಳಿಯಿಂದ ನಷ್ಟವಾಗಿರುವ ಪ್ರತಿ ಎಕೆರೆಗೆ 1 ಲಕ್ಷ ಪರಿಹಾರ ನೀಡಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ವಲಯ ಅರಣ್ಯಾಧಿಕಾರಿ ಕಚೇರಿಯ ವ್ಯವಸ್ಥಾಪಕ ಶ್ರೀನಿವಾಸನ್ ಅವರಿಗೆ ಮನವಿ ಸಲ್ಲಿಸಿದರು.

ಒಂದೂವರೆ ದಶಕದಿಂದ ಕಾಡಾನೆ ದಾಳಿ ಸಮಸ್ಯೆ ಪರಿಹಾರ ಕಂಡಿಲ್ಲ. ಖಾಸಗಿ ಸಾಲ ಮಾಡಿ ಬೆಳೆದಿರುವ ಬೆಳೆ ನಾಶ ಮಾಡುತ್ತಲೇ ಇವೆ. ಆದರೆ, ಇದುವರೆಗೂ ಇಲಾಖೆಯು ಯಾವುದೇ ಶಾಶ್ವತ ಕ್ರಮಕೈಗೊಂಡಿಲ್ಲ ಎಂದು ದೂರಿದರು.

‘ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮೆಟೊ ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ಉತ್ತಮ ಬೆಲೆ ಇದೆ. ಆದರೆ, ಕಾಡಾನೆ ದಾಳಿಯಿಂದ ಕೈಗೆ ಬರುವ ಬೆಳೆ ಬಾಯಿಗೆ ಬರದಂತಾಗಿದೆ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕಾಡಾನೆ ದಾಳಿಯಿಂದ ಬೆಳೆ ಅಲ್ಲದೆ ಪ್ರಾಣ ಹಾನಿ ಕೂಡ ಸಂಭವಿಸಿದೆ. 15ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಂತರ ಕಾಳಜಿವಹಿಸುತ್ತಿಲ್ಲ ಎಂದು ಆರೋಪಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಅಕಾಲಿಕ ಮಳೆಗೆ ಅಪಾರ ಬೆಳೆ ನಾಶವಾಗಿದೆ. ಉಳಿದಿರುವ ಅಲ್ಪಸ್ವಲ್ಪ ಬೆಳೆಯನ್ನು ಆನೆಗಳು ನಾಶ ಮಾಡುತ್ತಿವೆ. ಕಣ್ಮುಂದೆ ಬೆಳೆ ನಾಶ ಮಾಡುತ್ತಿದ್ದರೂ ರೈತರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂದರು.

ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ ವ್ಯವಸ್ಥಾಪಕರು ಮಾತನಾಡಿ, ‘ಆನೆಗಳ ಹಾವಳಿ ತಡೆಗೆ ಸೋಲಾರ್ ಅಳವಡಿಸಲಾಗುತ್ತಿದೆ. ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದರು.

ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ತಾಲ್ಲೂಕು ಅಧ್ಯಕ್ಷ ಐತಂಡಹಳ್ಳಿ ಮುನ್ನ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಕಾರಹಳ್ಳಿ ಚಲಪತಿ, ಯಳಬುರ್ಗಿ ಶ್ರೀನಿವಾಸ, ಮರಗಲ್ ಮುನಿಯಪ್ಪ, ಯುವ ರೈತ ಮುಖಂಡ ಯಾರಂಘಟ್ಟ ಗಿರೀಶ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಆರೀಫ್, ಜಾವಿದ್, ಗೌಸ್, ಬೂದಿಕೋಟೆ ಹೋಬಳಿ ಅಧ್ಯಕ್ಷ ನಾಗಯ್ಯ, ಭೀಮಗಾನಹಳ್ಳಿ ಮುನಿರಾಜು, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣಯ್ಯ, ಪಾರಂಡಹಳ್ಳಿ ಮಂಜುನಾಥ, ನಾಗಭೂಷಣ್, ವೇಣುಗೋಪಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.