ADVERTISEMENT

ಬೆಳೆ ವಿಮೆ ನೋಂದಣಿ ಹೆಚ್ಚಳ

ಜಿಲ್ಲೆಯಲ್ಲಿ ರಾಗಿ ಬೆಳೆಗೆ ಹೆಚ್ಚಿನ ರೈತರಿಂದ ನೋಂದಣಿ

ಕೆ.ಓಂಕಾರ ಮೂರ್ತಿ
Published 8 ಅಕ್ಟೋಬರ್ 2022, 6:03 IST
Last Updated 8 ಅಕ್ಟೋಬರ್ 2022, 6:03 IST
ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ಜಲಾವೃತಗೊಂಡಿದ್ದ ರಾಗಿ ಬೆಳೆ
ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ಜಲಾವೃತಗೊಂಡಿದ್ದ ರಾಗಿ ಬೆಳೆ   

ಕೋಲಾರ: ಮುಂಗಾರು ಮಳೆಯ ಅಬ್ಬರದಿಂದ ಈ ಬಾರಿ ತೊಂದರೆಗೆ ಸಿಲುಕಿರುವ ಜಿಲ್ಲೆಯ ರೈತರು ಮುನ್ನೆಚ್ಚರಿಕೆ ಕ್ರಮವಾಗಿ 2022–23ನೇ ಸಾಲಿನಲ್ಲಿ ವಿವಿಧ ಬೆಳೆಗೆ ಅಧಿಕ ಸಂಖ್ಯೆಯಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ.

ಜಿಲ್ಲೆಯ ಆರೂ ತಾಲ್ಲೂಕುಗಳಿಂದ ಹುರುಳಿ, ನೆಲಗಡಲೆ, ಭತ್ತ, ತೊಗರಿ, ರಾಗಿ ಬೆಳೆ ಸೇರಿ ಒಟ್ಟು 5,038 ಮಂದಿ 2,847 ಹೆಕ್ಟೇರ್‌ ಜಮೀನಿಗೆ ಬೆಳೆ ವಿಮೆ ಮಾಡಿಸಿದ್ದಾರೆ. ಕಳೆದ ಬಾರಿ 3,508 ಮಂದಿ 2,847 ಹೆಕ್ಟೇರ್‌ ಜಮೀನಿಗೆ ವಿಮೆ ಮಾಡಿಸಿದ್ದರು.

ಅದರಲ್ಲೂ ರಾಗಿ ಬೆಳೆಗೆ ಹೆಚ್ಚಿನ ಸಂಖ್ಯೆಯ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ. ಜೊತೆಗೆ ಕೃಷಿ ಇಲಾಖೆ ಕೂಡ ಬೆಳೆ ವಿಮೆ ಮಾಡಿಸುವಂತೆ ಪ್ರಚುರಪಡಿಸಿದ್ದು ಫಲ ನೀಡಿದೆ. ಆದರೆ, ಹುರುಳಿ ಬೆಳೆಗೆ ಕೇವಲ 6 ರೈತರು ನೋಂದಣಿ ಮಾಡಿಸಿದ್ದಾರೆ. ಬೆಳೆ ವಿಮೆ ನೋಂದಣಿಯ ಕೊನೆಯ ದಿನಾಂಕ ಆಗಸ್ಟ್‌ ತಿಂಗಳಲ್ಲೇ ಮುಗಿದಿದೆ.

ADVERTISEMENT

‘ಬೆಳೆ ವಿಮೆ ನೋಂದಣಿಗೆ ಜಿಲ್ಲೆಯ ರೈತರಿಂದ ಈ ಬಾರಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ವಿ.ಡಿ.ರೂಪಾದೇವಿ ತಿಳಿಸಿದರು.

ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟ, ಕೀಟಬಾಧೆಯಿಂದ ತೊಂದರೆ ಒಳಾಗಿರುವುದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ಒಂದು ಕಾರಣ. ಬೆಳೆ ನಾಶವಾದರೂ ಪರಿಹಾರ ದೊರಕುತ್ತದೆ ಎಂಬ ಆಶಾ ಭಾವನೆ ರೈತರಲ್ಲಿ ಮೂಡಿದೆ.

ಜಿಲ್ಲೆಯಲ್ಲಿ ತಿಂಗಳ ಹಿಂದೆ ಬಿದ್ದ ಮಳೆ ಪರಿಣಾಮ ರೈತರು ಭಾರಿ ನಷ್ಟ ಅನುಭವಿಸಿದ್ದಾರೆ. ಅದರಲ್ಲೂ ಬಿತ್ತನೆ ಮಾಡಿದ ರಾಗಿ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಹೀಗಾಗಿ, ಹಲವರು ಎರಡೆರಡು ಬಾರಿ ಬಿತ್ತನೆ ಮಾಡಿದ್ದರು.

ಕೆಲ ಬೆಳೆಗಳಿಗೆ ಮಾತ್ರ ರೈತರು ಬೆಳೆ ವಿಮೆ ಮಾಡಿಸಿಕೊಂಡಿಲ್ಲ. ಜೊತೆಗೆ ಹಲವರಿಗೆ ಹಿಂಗಾರಿನ ಬೆಳೆ ವಿಮೆ ಪರಿಹಾರ ಇನ್ನೂ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.