ADVERTISEMENT

ಗುಣಮುಖ ಪ್ರಮಾಣ ದಾಖಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 16:13 IST
Last Updated 21 ಅಕ್ಟೋಬರ್ 2020, 16:13 IST

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಗುಣಮುಖ ಪ್ರಮಾಣದಲ್ಲಿ ದಾಖಲೆಯ ಏರಿಕೆಯಾಗಿದ್ದು, ಬುಧವಾರ ಆಸ್ಪತ್ರೆಯಿಂದ ಮನೆಗೆ ಮರಳಿದವರ ಸಂಖ್ಯೆ ಶತಕದ ಗಡಿ ದಾಟಿತು.

ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಗುಣಮುಖರಾದವರ ಸಂಖ್ಯೆ ಹೆಚ್ಚಳವಾಗಿದ್ದು, ಆರೋಗ್ಯ ಇಲಾಖೆ ಕೊಂಚ ನಿರಾಳವಾಗಿದೆ. ಕೋಲಾರ ತಾಲ್ಲೂಕಿನ 46 ಮಂದಿ, ಮಾಲೂರು ತಾಲ್ಲೂಕಿನ 29, ಬಂಗಾರಪೇಟೆ ತಾಲ್ಲೂಕಿನ 18, ಕೆಜಿಎಫ್‌ ತಾಲ್ಲೂಕಿನ 24, ಮುಳಬಾಗಿಲು ತಾಲ್ಲೂಕಿನ 19 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 16 ಮಂದಿಯನ್ನು ಆಸ್ಪತ್ರೆಯಿಂದ ಬೀಳ್ಕೊಡಲಾಯಿತು.

ಜಿಲ್ಲೆಯಲ್ಲಿ ಹೊಸದಾಗಿ 53 ಮಂದಿಗೆ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 1,006ಕ್ಕೆ ಏರಿಕೆಯಾಗಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಜತೆಗೆ ಸೋಂಕಿತರ ಸಂಪರ್ಕದಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿದೆ.

ADVERTISEMENT

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 17 ಮಂದಿಗೆ ಸೋಂಕು ತಗುಲಿದೆ. ಮಾಲೂರು ತಾಲ್ಲೂಕಿನ 10, ಬಂಗಾರಪೇಟೆ ತಾಲ್ಲೂಕಿನ 8, ಕೆಜಿಎಫ್‌ ತಾಲ್ಲೂಕಿನ 7, ಮುಳಬಾಗಿಲು ತಾಲ್ಲೂಕಿನ 6 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 5 ಮಂದಿಗೆ ಸೋಂಕು ಬಂದಿರುವುದು ಖಚಿತವಾಗಿದೆ.

ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.