ADVERTISEMENT

ಶ್ರೀನಿವಾಸಪುರ: ಮಾವಿನ ಮಡಿಲಲ್ಲಿ ಸೀತಾಫಲ ಘಮ

ಆರ್.ಚೌಡರೆಡ್ಡಿ
Published 6 ನವೆಂಬರ್ 2020, 2:54 IST
Last Updated 6 ನವೆಂಬರ್ 2020, 2:54 IST
ರಸ್ತೆಬದಿಯಲ್ಲಿ ಮಾರಾಟಕ್ಕೆ ಇಡಲಾಗಿರುವ ಸೀತಾಫಲ
ರಸ್ತೆಬದಿಯಲ್ಲಿ ಮಾರಾಟಕ್ಕೆ ಇಡಲಾಗಿರುವ ಸೀತಾಫಲ   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಈಗ ಸೀತಾಫಲ ಸುಗ್ಗಿ. ಕಾಡುಮೇಡು ಹಾಗೂ ಬೇಲಿಗಳಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಸೀತಾಫಲ ಗಿಡಗಳು ಕಾಯಿ ಬಿಟ್ಟು ಕಂಗೊಳಿಸುತ್ತಿವೆ.

ತಾಲ್ಲೂಕಿನ ಉತ್ತರ ಭಾಗದ ಗುಡ್ಡಗಾಡು ಸೀತಾಫಲಕ್ಕೆ ಪ್ರಸಿದ್ಧಿ ಪಡೆದಿದೆ. ಈ ಪ್ರದೇಶದ ಬಡವರು ಕಾಡುಮೇಡು ಸುತ್ತಿ ಸೀತಾಫಲ ಸಂಗ್ರಹಿಸಿ ಮಾರಾಟ ಮಾಡುವುದರ ಮೂಲಕ ನಾಲ್ಕು ಕಾಸು ಸಂಪಾದಿಸುತ್ತಾರೆ.

ಸೀತಾಫಲಕ್ಕೆ ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಒಳ್ಳೆಯ ಬೇಡಿಕೆ ಇದೆ. ಉತ್ತಮ ಗುಣಮಟ್ಟದ ಫಲ ಕೆಜಿಯೊಂದಕ್ಕೆ ₹ 80 ರವರೆಗೆ ಮಾರಾಟವಾಗುತ್ತದೆ. ಆದರೆ, ಇಲ್ಲಿನ ಜನ ತಾವು ಸಂಗ್ರಹಿಸಿದ ಹಸಿ ಸೀತಾಫಲವನ್ನು ತಮ್ಮ ಗ್ರಾಮಗಳ ಸಮೀಪದ ರಸ್ತೆ ಅಂಚಿನಲ್ಲಿ ಬುಟ್ಟಿಯಲ್ಲಿ ಜೋಡಿಸಿಟ್ಟು ಮಾರಾಟ ಮಾಡುತ್ತಾರೆ. ಇಲ್ಲಿ ತೂಕ ಮಾಡಿ ಕೊಡುವ ಪದ್ಧತಿ ಇಲ್ಲ. ಬುಟ್ಟಿಯ ಮೇಲೆ ಇಂತಿಷ್ಟು ಹಣ ಎಂದು ಪಡೆದು ಕೊಟ್ಟುಬಿಡುತ್ತಾರೆ.

ADVERTISEMENT

ಬೇರೆಲ್ಲೂ ಕಾಣಲು ಸಾಧ್ಯವಿಲ್ಲದಷ್ಟು ಸಂಖ್ಯೆಯ ಸೀತಾಫಲ ಗಿಡಗಳು ಈ ಪ್ರದೇಶದಲ್ಲಿ ಹರಡಿಕೊಂಡಿವೆ. ಅದಕ್ಕೆ ಇಲ್ಲಿನ ಜನರ ಸೀತಾಫಲ ಪ್ರೇಮ ಕಾರಣ. ಗುಡ್ಡಗಾಡಲ್ಲಿ ಬೆಳೆಯುವ ಮರಗಳ ಮಾತಂತಿರಲಿ, ಸ್ವಂತ ಜಮೀನಲ್ಲಿ ಸೀತಾಫಲ ಗಿಡ ಇದ್ದರೂ ಕಡಿಯುವುದಿಲ್ಲ. ಸಾಮಾನ್ಯವಾಗಿ ಹೊಲದ ಕಟವೆಗಳಲ್ಲಿ ಈ ಗಿಡಗಳಿಗೆ ಸ್ಥಾನ ಕಲ್ಪಿಸಿದ್ದಾರೆ. ಹೊಲದ ಸುತ್ತಲಿನ ಬದುಗಳ ಪಕ್ಕದಲ್ಲಿಯೂ ಇವು ಜೀವಂತವಾಗಿವೆ. ಸೌದೆಗಾಗಿ ಎಲ್ಲ ಜಾತಿಯ ಗಿಡಗಳನ್ನೂ ಕಡಿಯುವುದುಂಟು. ಆದರೆ, ಸೀತಾಫಲ ಗಿಡ ಕಡಿಯಬಾರದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ನಂಬಿಕೆಯಿಂದಾಗಿ ಅದು ಇನ್ನೂ ಜೀವಂತವಾಗಿದೆ.

ಕೃಷಿಕರು ತಮ್ಮ ಜಮೀನು ಪಕ್ಕದಲ್ಲಿ ಬೆಳೆದ ಸೀತಾಫಲ ಗಿಡಗಳಿಂದ ಕಾಯಿ ಬಿಡಿಸಿ, ಹಣ್ಣು ಮಾಡಿ ತಿನ್ನುತ್ತಾರೆ. ಕಾವಲು ಕಾಯುವ ಪದ್ಧತಿ ಇಲ್ಲ. ಗಿಡದಲ್ಲಿ ಕಾಯಿ ಇದ್ದರೆ ಯಾರೇ ಆದರೂ ಕಿತ್ತುಕೊಂಡು ಹೋಗಬಹುದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಉಚಿತ ಕೊಯ್ಲು ದೂರವಾಗುತ್ತಿದೆ. ಕೆಲವರು ಕಾಯಿ ಬಿಡಿಸಿ ಮಾರತೊಡಗಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಫಸಲು ಬಂದಿದೆ. ಇದಕ್ಕೆ ಆಗಾಗ ಸುರಿಯುತ್ತಿರುವ ಮಳೆ ಕಾರಣ. ಕಡಿಮೆ ತೇವಾಂಶದಲ್ಲೂ ಬದುಕುವ ಗುಣವುಳ್ಳ ಈ ಗಿಡ, ತಾನಾಗಿಯೇ ಒಣಗಿದ್ದಿಲ್ಲ. ಮಳೆ ಪ್ರಮಾಣ ತೀರಾ ಕಡಿಮೆಯಾದರೆ, ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಾಯಿಯ ಗಾತ್ರ ಕಡಿಮೆಯಾಗುತ್ತದೆ.

ಇಲ್ಲಿನ ಕೆಲವರು ವಾಡಿಕೆಯಂತೆ ಕಾಯಿ ಕಿತ್ತು ಮಾರುತ್ತಾರೆ. ಶಾಲಾ ಮಕ್ಕಳೂ ಭಾನುವಾರ ಹಿರಿಯರೊಂದಿಗೆ ಕಾಡುಮೇಡು ಸುತ್ತಿ ಸೀತಾಫಲ ಸಂಗ್ರಹಣೆಯಲ್ಲಿ ತೊಡಗುತ್ತಾರೆ.

‘ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಖರೀದಿಸಿ ಲಾಭದಾಯಕ ಬೆಲೆಗೆ ಮಾರುತ್ತಾರೆ. ಬಸ್‌ ಪ್ರಯಾಣ ದರ, ಲಗೇಜ್‌, ಕಮಿಷನ್‌ ಕಳೆದರೆ ಕೈಗೆ ಬರುವುದು ಅಷ್ಟಕ್ಕಷ್ಟೆ’ ಎನ್ನುತ್ತಾರೆ ಕೃಷಿಕ ಮಹಿಳೆ ಲಕ್ಷ್ಮಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.