ಬಂಗಾರಪೇಟೆ: ತಾಲ್ಲೂಕಿನ ಬೀರಂಡಹಳ್ಳಿ ಗ್ರಾಮದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಆರ್. ರವಿ ಬುಧವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ‘ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರಿಗೆ ಜೀವನ ರೂಪಿಸಿಕೊಳ್ಳಲು ಅಗತ್ಯವಿರುವ ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯಗಳನ್ನು ಒದಗಿಸಬೇಕು. ಈ ಮೂಲಕ ಅವರನ್ನು ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಿಸಬೇಕು. ಇದು ಅವರ ಪುನರ್ವಸತಿಗೆ ಸಹಾಯ ಮಾಡುತ್ತದೆ’ ಎಂದರು.
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 131 ಪುರುಷರು ಮತ್ತು 27 ಮಹಿಳೆಯರು ಸೇರಿದಂತೆ ಒಟ್ಟಾರೆ 158 ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಹಿತದೃಷ್ಟಿಯಿಂದ ವಸತಿ, ಆಹಾರ, ನೀರು, ನೈರ್ಮಲ್ಯ ಮತ್ತು ಸುರಕ್ಷತೆಗಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.
ನಿರಾಶ್ರಿತರ ಪರಿಹಾರ ಕೇಂದ್ರವು ಉತ್ತಮ ರೀತಿಯ ಮೂಲ ಸೌಲಭ್ಯ ಹೊಂದಿದೆ. ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಅವರ ಜೀವನೋಪಾಯಕ್ಕಾಗಿ ಸ್ವಲ್ಪ ಹಣವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಪುರುಷ ಡ್ಯಾರ್ಮೇಂಟರಿ ಕಟ್ಟಡದಲ್ಲಿ ಎಲ್ಲ ಮೂಲ ಸೌಕರ್ಯಗಳಿವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳದ ಬಗ್ಗೆ ಜಿಲ್ಲಾಧಿಕಾರಿ ಬೇಸರ ವ್ಯಕ್ತಪಡಿಸಿದರು.
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ ಕೆಲವು ಸಮಸ್ಯೆ, ಅವ್ಯವಸ್ಥೆಗಳನ್ನು ಕಂಡ ಜಿಲ್ಲಾಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬರಲು ಸೂಕ್ತ ಸಂಪರ್ಕ ರಸ್ತೆ ಇಲ್ಲ. ಇದರಿಂದಾಗಿ ಕೇಂದ್ರಕ್ಕೆ ಬರುವವರು ಅನಿವಾರ್ಯವಾಗಿ ರೈಲ್ವೆ ಹಳಿಗಳನ್ನು ದಾಟಿಕೊಂಡು ಬರುವಂತಾಗಿದೆ. ಹೀಗಾಗಿ, ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತುರ್ತಾಗಿ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ಈ ವೇಳೆ ತಹಶೀಲ್ದಾರ್ ಎಸ್. ವೆಂಕಟೇಶಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ. ಶ್ರೀನಿವಾಸನ್, ಸಹಾಯಕ ನಿರ್ದೇಶಕಿ ಅಂಜಲಿದೇವಿ, ರಾಜಸ್ವ ನಿರೀಕ್ಷಕ ಅಜಯ್, ಸಂಸ್ಥೆ ಅಧಿಕಾರಿ ಸುನೀತಾ ಹಾಜರಿದ್ದರು.
98 ಮಂದಿಗಿಲ್ಲ ಆಧಾರ್ ಕಾರ್ಡ್
ನಿರಾಶ್ರಿತರ ಕೇಂದ್ರದಲ್ಲಿರುವವರ ಪೈಕಿ 98 ಮಂದಿಯ ಬಳಿ ಆಧಾರ್ ಕಾರ್ಡ್ ಇಲ್ಲದಿರುವುದು ಕಂಡುಬಂದಿದೆ. ಅವರ ಕುಟುಂಬದ ಜೊತೆಗಿದ್ದಾಗ ಆಧಾರ್ ನೋಂದಣಿ ಮಾಡಿಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಅತೀ ಜರೂರಾಗಿ ಆಧಾರ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿ ತಿಳಿಸಿದರು. ನಿರಾಶ್ರಿತರ ಪೈಕಿ ಕೆಲವರು ಬುದ್ಧಿಮಾಂದ್ಯರು ಇದ್ದು ಅವರ ಆರೋಗ್ಯದ ದೃಷ್ಟಿಯಿಂದ ಮನೋವೈದ್ಯರು ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸಂಸ್ಥೆಯಲ್ಲಿ ನಿರಾಶ್ರಿತರಿಗೆ ನೀಡಲಾಗುವ ಆಹಾರ ನೀರು ವಸತಿ ಮತ್ತು ಆರೋಗ್ಯ ಸೇವೆಗಳು ಮತ್ತು ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.