ADVERTISEMENT

ಡಿಸಿಸಿ ಬ್ಯಾಂಕ್ ದೈವ ಸಮಾನ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 15:21 IST
Last Updated 2 ಜುಲೈ 2020, 15:21 IST
ಶಾಸಕ ಕೆ.ಶ್ರೀನಿವಾಸಗೌಡ ಕೋಲಾರ ತಾಲ್ಲೂಕಿನ ಮದ್ದೇರಿ ಗ್ರಾಮದಲ್ಲಿ ಗುರುವಾರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್‌ ವಿತರಿಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಕೋಲಾರ ತಾಲ್ಲೂಕಿನ ಮದ್ದೇರಿ ಗ್ರಾಮದಲ್ಲಿ ಗುರುವಾರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್‌ ವಿತರಿಸಿದರು.   

ಕೋಲಾರ: ‘ಕೊರೊನಾ ಸೋಂಕಿನ ಸಂಕಷ್ಟದ ಸಂದರ್ಭದಲ್ಲೂ ಬಡ್ಡಿರಹಿತ ಸಾಲ ನೀಡಿ ಆರ್ಥಿಕ ಶಕ್ತಿ ತುಂಬುತ್ತಿರುವ ಡಿಸಿಸಿ ಬ್ಯಾಂಕ್ ದೈವ ಸಮಾನ. ಬ್ಯಾಂಕ್‌ ಉಳಿಸಿ ಬೆಳೆಸುವ ಜವಾಬ್ದಾರಿ ರೈತರು ಮತ್ತು ಮಹಿಳೆಯರ ಮೇಲಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಡಿಸಿಸಿ ಬ್ಯಾಂಕ್‌ ಹಾಗೂ ತಾಲ್ಲೂಕಿನ ಮದ್ದೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ (ಎಸ್‍ಎಫ್‌ಸಿಎಸ್‌) ಸಹಯೋಗದಲ್ಲಿ ಮದ್ದೇರಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ₹ 1.70 ಕೋಟಿ ಸಾಲದ ಚೆಕ್‌ ವಿತರಿಸಿ ಮಾತನಾಡಿದರು.

‘ಸಂಕಷ್ಟದಲ್ಲಿ ನೆರವು ನೀಡುವವರು ದೇವರಿಗೆ ಸಮಾನ. ಅಂತಹ ಸ್ಥಾನದಲ್ಲಿ ನಿಂತಿರುವ ಡಿಸಿಸಿ ಬ್ಯಾಂಕ್ ಮನೆ ಬಾಗಿಲಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಬಡ ಜನರ ಕೈ ಹಿಡಿದಿದೆ. ಆರ್ಥಿಕವಾಗಿ ದಿವಾಳಿಯಾಗಿದ್ದ ಬ್ಯಾಂಕ್ ಚೇತರಿಸಿಕೊಂಡು ಇಡೀ ದೇಶಕ್ಕೆ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಸಾಲ ನೀಡಿಕೆಗೆ ಜಾತಿ, ಪಕ್ಷ ನೋಡಿಲ್ಲ. ಮಹಿಳೆಯರು ಸಂಘ ರಚಿಸಿಕೊಂಡು ಬಂದಾಗ ಯಾವ ಪಕ್ಷ, ಜಾತಿ ಎಂದು ಪ್ರಶ್ನಿಸದೆ ಸಾಲ ಕೊಟ್ಟಿದ್ದೇವೆ. ಬದುಕಿಗೆ ಆಸರೆಯಾಗಿರುವ ಬ್ಯಾಂಕ್‌ನಲ್ಲೇ ಉಳಿತಾಯದ ಹಣ ಠೇವಣಿ ಇಡಬೇಕು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಮನವಿ ಮಾಡಿದರು.

‘ಸೊಸೈಟಿ ಇನ್ನು ಮುಂದೆ ಡಿಸಿಸಿ ಬ್ಯಾಂಕ್ ಇದ್ದಂತೆ. ಮಹಿಳೆಯರು ಸೊಸೈಟಿಯಲ್ಲೇ ಠೇವಣಿ ಇಡಬಹುದು. ವಾಣಿಜ್ಯ ಬ್ಯಾಂಕ್‌ಗಳಲ್ಲಿನ ಖಾತೆಯನ್ನು ಧೈರ್ಯದಿಂದ ಡಿಸಿಸಿ ಬ್ಯಾಂಕ್‌ಗೆ ಬದಲಿಸಿ’ ಎಂದು ಕೋರಿದರು.

ಹೆಚ್ಚಿನ ಸಾಲ: ‘ಮದ್ದೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮತ್ತಷ್ಟು ಸಂಘ ರಚಿಸಿಕೊಂಡರೆ ಹೆಚ್ಚಿನ ಸಾಲ ನೀಡಲಾಗುವುದು. ಬಡ್ಡಿರಹಿತ ಸಾಲದ ಸದುಪಯೋಗ ಪಡೆಯಿರಿ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಕಿವಿಮಾತು ಹೇಳಿದರು.

‘ಸೊಸೈಟಿಗಳು ದಿವಾಳಿಯಾಗಿ ಸಕ್ಕರೆ, ಸೀಮೆಎಣ್ಣೆ ವಿತರಣೆಗೆ ಸೀಮಿತವಾಗಿದ್ದವು. ಅಂತಹ ಸಹಕಾರ ಸಂಸ್ಥೆಗಳಿಗೆ ಮರುಜೀವ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದ್ದು, ಬಡ ರೈತರು ಮತ್ತು ಮಹಿಳೆಯರ ಜೀವಾಳವಾಗಿದೆ’ ಎಂದು ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್ ಅಭಿಪ್ರಾಯಪಟ್ಟರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ್, ಮದ್ದೇರಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ಶ್ರೀನಿವಾಸಗೌಡ, ಉಪಾಧ್ಯಕ್ಷೆ ಮುನಿರಾಮಕ್ಕ, ನಿರ್ದೇಶಕರಾದ ಶ್ರೀನಿವಾಸ್, ವೆಂಕಟರೆಡ್ಡಿ, ಕೃಷ್ಣಪ್ಪ, ಮಲ್ಲೇಗೌಡ, ನಾರಾಯಣಮ್ಮ, ಈರಮ್ಮ, ನಾರಾಯಣಸ್ವಾಮಿ, ಅಶ್ವತ್ಥ್‌, ಮಾಜಿ ಅಧ್ಯಕ್ಷ ವೆಂಕಟರಾಮ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.