
ಕೋಲಾರ: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆಯಾದರು.
ಬ್ಯಾಂಕ್‌ನ 12 ನಿರ್ದೇಶಕರ ಸ್ಥಾನಕ್ಕೆ (ಒಟ್ಟು 18 ನಿರ್ದೇಶಕರ ಪೈಕಿ 6 ಮಂದಿ ಅವಿರೋಧ ಆಯ್ಕೆ) ಮೇ 28ರಂದು ಚುನಾವಣೆ ನಡೆದಿತ್ತು. ಈ ಪೈಕಿ ಕೋಲಾರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಒಟ್ಟು 12 ಮತಗಳು ಇದ್ದವು. ಅದರಲ್ಲಿ ಆಗ ಮುನಿರಾಜು 5 ಹಾಗೂ ಮೈತ್ರಿಕೂಟದ ಅಭ್ಯರ್ಥಿ ಎಂ.ಆನಂದಕುಮಾರ್ 6 ಮತ ಪಡೆದಿದ್ದರು. ಕ್ಯಾಲನೂರು ಸೊಸೈಟಿಗೆ ಸಂಬಂಧಿಸಿದ ಒಂದು ಮತದ ಹಕ್ಕಿನ ವಿಚಾರದಲ್ಲಿ ನ್ಯಾಯಾಲಯ ಮೊರೆ ಹೋಗಲಾಗಿತ್ತು.
ಅದೀಗ ಇತ್ಯರ್ಥಗೊಂಡಿದ್ದು, ಆ ಮತ ಎಣಿಕೆ ನಡೆಸಲು ನ್ಯಾಯಾಲಯ ಆದೇಶಿಸಿತ್ತು. ಡಿಸಿಸಿ ಬ್ಯಾಂಕ್ ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್.ಮೈತ್ರಿ, ಉಭಯ ಅಭ್ಯರ್ಥಿಗಳ ಸಮ್ಮುಖದಲ್ಲಿ ಬುಧವಾರ ಮತ ಪೆಟ್ಟಿಗೆ ತೆಗೆದು ಎಣಿಕೆ ನಡೆಸಿದರು.
ಆ ಮತ ಮುನಿರಾಜು ಪರವಾಗಿತ್ತು. ಇದರಿಂದ ಇಬ್ಬರಿಗೂ ತಲಾ ಆರು ಮತಗಳು ಬಂದಂತಾಗಿ ಸಮಬಲವಾಯಿತು. ಫಲಿತಾಂಶ ನಿರ್ಧರಿಸಲು ಡಾ.ಮೈತ್ರಿ ಅವರು ಲಾಟರಿ ಮೊರೆ ಹೋದರು. ಇಬ್ಬರ ಹೆಸರನ್ನು ಪೆಟ್ಟಿಗೆಗೆ ಬರೆದು ಹಾಕಿ ಲಾಟರಿ ಎತ್ತಿದರು. ಅದರಲ್ಲೂ ಮುನಿರಾಜು ಅವರಿಗೆ ಅದೃಷ್ಟ ಒಲಿಯಿತು. ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮುನಿರಾಜು ಅವರು ಬೆಂಬಲಿಗರೊಂದಿಗೆ ಸಂಭ್ರಮಿಸಿದರು. ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಮುಖಂಡ ನಂದಿನಿ ಪ್ರವೀಣ್ ಸೇರಿದಂತೆ ಹಲವರು ಹೂಮಾಲೆ ಹಾಕಿ ಅಭಿನಂದಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರಾಜು, ‘ಏಳು ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡ ಸ್ಪರ್ಧಿಸುವಾಗ ನಾನೂ ಸ್ಪರ್ಧೆಯ ಇರಾದೆ ವ್ಯಕ್ತಪಡಿಸಿದ್ದೆ. ಆಗ ಈ ಬಾರಿ ತಾನು ಸ್ಪರ್ಧಿಸಿ ಮುಂದಿನ ಬಾರಿ ಬಿಟ್ಟುಕೊಡುವುದಾಗಿ ಹೇಳಿದ್ದರು. ಆದರೆ, ನ್ಯಾಯಾಲಯಕ್ಕೆ ಎಳೆದು ಫಲಿತಾಂಶ ತಡವಾಗಿ ಹೊರಬೀಳಲು ಕಾರಣರಾದರು’ ಎಂದರು.
ನಾನು ಈ ಹಿಂದೆ ಡಿಸಿಸಿ ಬ್ಯಾಂಕ್‌ನಲ್ಲಿ 15 ವರ್ಷ ಉದ್ಯೋಗಿಯಾಗಿ ಕೆಲಸ ಮಾಡಿದ್ದೆ. 2013ರಲ್ಲಿ ವಿಆರ್‌ಎಸ್ ತೆಗೆದುಕೊಂಡಿದ್ದೆ. ಈಗ ನಿರ್ದೇಶಕನಾಗಿ ಬಂದಿದ್ದೇನೆ. ಐದು ವರ್ಷಗಳ ಹಿಂದೆ ಇದ್ದ ರೀತಿ ಬ್ಯಾಂಕ್ ಅನ್ನು ಸದೃಢಗೊಳಿಸುವುದು ನಮ್ಮ ಗುರಿ. ಮಹಿಳೆಯರು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡಿಸುವುದು, ಸಾಲ ವಸೂಲಾತಿ ಪ್ರಕ್ರಿಯೆ ಚುರುಕುಗೊಳಿಸಿ ಬ್ಯಾಂಕ್ ಅನ್ನು ಉತ್ತಮ ಸ್ಥಿತಿಗೆ ತಲುಪಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಆಡಳಿತ ಮಂಡಳಿಯಲ್ಲಿ ಒಟ್ಟು 18 ನಿರ್ದೇಶಕರ ಸ್ಥಾನಗಳಿದ್ದು ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. 12 ನಿರ್ದೇಶಕರ ಕ್ಷೇತ್ರಗಳಿಗೆ ಮೇ 28ರಂದು ಚುನಾವಣೆ ನಡೆದಿತ್ತು. 4 ಕ್ಷೇತ್ರಗಳ ಫಲಿತಾಂಶವನ್ನು ನ್ಯಾಯಾಲಯ ಆದೇಶದ ಮೇರೆಗೆ ತಡೆ ಹಿಡಿಯಲಾಗಿತ್ತು. ಉಳಿದ 8 ಕ್ಷೇತ್ರಗಳ ಫಲಿತಾಂಶ ಘೋಷಿಸಲಾಗಿತ್ತು. ಈಗ ಮುನಿರಾಜು ಆಯ್ಕೆಯೊಂದಿಗೆ ಮತ್ತೊಂದು ಕ್ಷೇತ್ರ ಫಲಿತಾಂಶ ಪ್ರಕಟಗೊಂಡಿದೆ. ಆರು ಅವಿರೋಧ ಆಯ್ಕೆ ಸೇರಿ ಒಟ್ಟು 15 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಂತಾಗಿದೆ. ಇದರಲ್ಲಿ ಕಾಂಗ್ರೆಸ್ ಬಣಗಳ ಬೆಂಬಲಿತ 10 ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಮೂವರು ಒಬ್ಬರು ಕಾಂಗ್ರೆಸ್ ಬಂಡಾಯ ಹಾಗೂ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾಗಿರುವ ವೆಂಕಟರಮಣರೆಡ್ಡಿ ಕೆ.ಎನ್ ಸ್ವತಂತ್ರ ಅಭ್ಯರ್ಥಿ. ಅವರು ಆ ಕ್ಷೇತ್ರದ ಶಾಸಕ ಪುಟ್ಟಸ್ವಾಮಿ ಬೆಂಬಲಿತ ಅಭ್ಯರ್ಥಿ ಕೂಡ. ಇನ್ನು ಬ್ಯಾಂಕ್‌ನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಘಗಳ ನಿರ್ದೇಶಕರ ಕ್ಷೇತ್ರದಲ್ಲಿ ಗೆದ್ದಿರುವ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದಾರೆ. ಇನ್ನೂ ಮೂರು ಕ್ಷೇತ್ರದ ಫಲಿತಾಂಶ ಘೋಷಣೆ ಬಾಕಿ ಇದೆ. ಆ ಬಳಿಕವಷ್ಟೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಕ್ಯಾಲನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮತ ಹಕ್ಕು ನಿಯಮ ಬಾಹಿರವಾಗಿದ್ದು ಸಂಘದ ಸರ್ವ ಸದಸ್ಯರ ಸಭೆಯನ್ನು ಬೈಲಾ ಪ್ರಕಾರ ನಡೆಸಿಲ್ಲ. ಜತೆಗೆ ಕಾನೂನು ಬಾಹಿರವಾಗಿ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡಿದ್ದು ಮತ ಹಕ್ಕು ವಜಾಗೊಳಿಸಬೇಕು ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಕ್ಷೇತ್ರದ ಫಲಿತಾಂಶವನ್ನು ಕಾಯ್ದಿರಿಸಲು ಸೂಚಿಸಿತ್ತು.
ತಲಾ 6 ಮತಗಳು ಬಂದಿದ್ದರಿಂದ ಚುನಾವಣಾಧಿಕಾರಿ ಡಾ.ಮೈತ್ರಿ ಅಭ್ಯರ್ಥಿಗಳ ಗಮನಕ್ಕೆ ತಂದು ಲಾಟರಿ ಎತ್ತುವುದಾಗಿ ತಿಳಿಸಿದರು. ಇದಕ್ಕೆ ಎನ್‌ಡಿಎ ಅಭ್ಯರ್ಥಿಯು ಆಕ್ಷೇಪ ವ್ಯಕ್ತಪಡಿಸಿ ಲಾಟರಿಯನ್ನು ಬೇರೆಯವರಿಂದ ಎತ್ತಿಸಬೇಕು ಎಂದರು. ಆಗ ಚುನಾವಣಾಧಿಕಾರಿಯು ‘ಪಾರದರ್ಶನವಾಗಿ ಪ್ರಕ್ರಿಯೆ ನಡೆಯುತ್ತಿದೆ. ಬೇರೆಯವರು ಎಂದರೆ ಇನ್ಯಾರ ಕೈಯಲ್ಲಿ ಎತ್ತಿಸಬೇಕು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.