
ಕೋಲಾರ: ಡಿಸಿಸಿ ಬ್ಯಾಂಕ್‌ನಿಂದ ವಿತರಣೆ ಮಾಡಲಾಗಿರುವ ಸಾಲ ಬಾಕಿ ಉಳಿದಿದ್ದು, ಅದನ್ನು ವಸೂಲಿ ಮಾಡಲು ಅಧಿಕಾರಿಗಳು ಮುಂದಾಗಬೇಕು. ಸ್ಥಗಿತಗೊಂಡಿರುವ ಸಾಲ ಸೌಲಭ್ಯ ವಿತರಣೆ ಕಾರ್ಯವನ್ನು ಮುಂದುವರಿಸಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಸೂಚಿಸಿದರು.
ನಗರದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸಹಕಾರ ಕೇಂದ್ರ ಬ್ಯಾಂಕ್ ಕಚೇರಿಯಲ್ಲಿ (ಡಿಸಿಸಿ ಬ್ಯಾಂಕ್) ಗುರುವಾರ ನಡೆದ ಸಭೆಯಲ್ಲಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ದೊಡ್ಡ ಮಟ್ಟದ ಹಣಕಾಸು ಸಂಸ್ಥೆಯನ್ನು ಉಳಿಸಿ ಬೆಳೆಸುವುದು ಸುಲಭದ ಮಾತಲ್ಲ. ಒಂದು ಕಾಲದಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ವೇತನ ನೀಡಲಾಗದ ಪರಿಸ್ಥಿತಿಯಲ್ಲಿ ಬ್ಯಾಂಕ್ ಇತ್ತು. ಈ ಹಿಂದಿನ ಆಡಳಿತ ಮಂಡಳಿಯ ಪ್ರಯತ್ನದಿಂದ ಕಳಂಕದಿಂದ ಹೊರ ಬಂದು ಸುಧಾರಣೆ ಮಾಡಿತ್ತು. ಇದೀಗ ಮತ್ತೆ 10 ವರ್ಷಗಳ ಹಿಂದಕ್ಕೆ ಹೋಗುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಮಂಡಳಿ ಇದ್ದಾಗ ಒಂದು ರೀತಿ, ಆಡಳಿತ ಮಂಡಳಿ ಇಲ್ಲದಿದ್ದಾಗ ಇನ್ನೊಂದು ರೀತಿ ನಡೆದುಕೊಳ್ಳಬಾರದು. ಆಡಳಿತ ಮಂಡಳಿ ಅವಧಿಯಲ್ಲಿ ನೀಡಲಾಗಿರುವ ಸಾಲವನ್ನು ಸಮರ್ಪಕವಾಗಿ ವಸೂಲಿ ಮಾಡಿಕೊಂಡು ಬಂದಿದ್ದರೆ ನಷ್ಟದ ಸುಳಿಯಲ್ಲಿ ಇರುತ್ತಿರಲಿಲ್ಲ ಎಂದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪಾಲಿಗೆ ಡಿಸಿಸಿ ಬ್ಯಾಂಕ್ ಜೀವನಾಡಿಯಾಗಿತ್ತು. ದೊಡ್ಡ ಮೊತ್ತದಲ್ಲಿ ಠೇವಣಿಯೂ ಇತ್ತು. ಯಾವಾಗ ಸಾಲ ವಿತರಣೆ ಮಾಡುವುದನ್ನು ನಿಲ್ಲಿಸಲಾಯಿತೋ ಅಲ್ಲಿಂದ ಠೇವಣಿದಾರರು ತಮ್ಮ ಹಣವನ್ನು ಹಿಂಪಡೆಯಲು ಶುರು ಮಾಡಿದರು. ಈಗಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ ಬ್ಯಾಂಕ್ ಸುಧಾರಣೆ ಆಗುವುದು ಕಷ್ಟ ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ. ತೆಗೆದುಕೊಳ್ಳುವ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡಬೇಕೆಂಬ ಪ್ರಾಮಾಣಿಕತನ ಬೇಡವೇ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ, ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ತಾಲೂಕಿನ ವಿವಿಧ ಸೊಸೈಟಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಇದ್ದರು.
ಸಭೆ ಸಮಾರಂಭಗಳಿಗೆ ಹೋದ ಕಡೆಯೆಲ್ಲ ಸಾರ್ವಜನಿಕರು ಡಿಸಿಸಿ ಬ್ಯಾಂಕ್ ವಿರುದ್ಧ ದೂರುಗಳ ಸುರಿಮಳೆಗರೆಯುತ್ತಿದ್ದಾರೆ. ಏನೆಂದು ಉತ್ತರ ಕೊಡಬೇಕೆಂದು ದೋಚುತ್ತಿಲ್ಲಕೊತ್ತೂರು ಮಂಜುನಾಥ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.