ADVERTISEMENT

ಡಿಡಿಪಿಯು ವೆಂಕಟಸ್ವಾಮಿ ಸೇವೆ ಮಾದರಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:20 IST
Last Updated 31 ಜುಲೈ 2019, 14:20 IST
ಸೇವೆಯಿಂದ ನಿವೃತ್ತರಾದ ಡಿಡಿಪಿಯು ಎಸ್.ವೆಂಕಟಸ್ವಾಮಿ ಅವರನ್ನು ಕೋಲಾರದಲ್ಲಿ ಬುಧವಾರ ಸನ್ಮಾನಿಸಲಾಯಿತು.
ಸೇವೆಯಿಂದ ನಿವೃತ್ತರಾದ ಡಿಡಿಪಿಯು ಎಸ್.ವೆಂಕಟಸ್ವಾಮಿ ಅವರನ್ನು ಕೋಲಾರದಲ್ಲಿ ಬುಧವಾರ ಸನ್ಮಾನಿಸಲಾಯಿತು.   

ಕೋಲಾರ: ‘ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಹಾಗೂ ಉಪ ನಿರ್ದೇಶಕರಾಗಿ ಪ್ರಾಮಾಣಿಕ ಸೇವೆ ಮೂಲಕ ವಿದ್ಯಾರ್ಥಿಗಳ ಮನ ಗೆದ್ದಿದ್ದ ಎಸ್.ವೆಂಕಟಸ್ವಾಮಿ ಅವರು ಸಮಾಜಕ್ಕೆ ಮಾದರಿ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಮಂಜುನಾಥ್ ಬಣ್ಣಿಸಿದರು.

ಸೇವೆಯಿಂದ ನಿವೃತ್ತರಾದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ವೆಂಕಟಸ್ವಾಮಿ ಅವರಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ‘ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿದ ವೆಂಕಟಸ್ವಾಮಿ ಅವರು ಕಾರ್ಯ ತತ್ಪರತೆಯಿಂದ ಬಡ್ತಿ ಪಡೆದು ಅನೇಕ ಹುದ್ದೆ ಅಲಂಕರಿಸಿದರು’ ಎಂದರು.

‘ಭೌತಶಾಸ್ತ್ರ ಉಪನ್ಯಾಸಕರಾಗಿ ಶ್ರೀನಿವಾಸಪುರದಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ವಲಯದಲ್ಲಿ ಗುರುತಿಸಿಕೊಂಡಿದ್ದ ವೆಂಕಟಸ್ವಾಮಿ ಸರ್ಕಾರಿ ಕಾಲೇಜಿನ ಮಕ್ಕಳು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸಿದರು. ಅವರು ಶ್ರೀನಿವಾಸಪುರ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾಗ ಆ ಕಾಲೇಜು ಇಡೀ ರಾಜ್ಯದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಸಾಧನೆ ಮಾಡಿತು’ ಎಂದು ಹೇಳಿದರು.

ADVERTISEMENT

‘ವೆಂಕಟಸ್ವಾಮಿ ಅವರು ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ನಂತರ ಕೋಲಾರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಅವರ ಪ್ರಾಮಾಣಿಕ ಸೇವೆ ಸ್ಮರಣೀಯ’ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ ತಿಳಿಸಿದರು.

‘ವೆಂಕಟಸ್ವಾಮಿಯವರು ಪ್ರಾಂಶುಪಾಲರಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಿದರು. ಜಿಲ್ಲಾಡಳಿತ ಅವರ ಕಾರ್ಯತತ್ಪರತೆ ಗುರುತಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿತ್ತು. ಅವರ ಎಲ್ಲೇ ಕೆಲಸ ಮಾಡಿದರೂ ಆದರ್ಶ, ಮೌಲ್ಯಗಳನ್ನು ಬಿಡಲಿಲ್ಲ’ ಎಂದರು.

ಸ್ಪರ್ಧೆ ಹೆಚ್ಚಿದೆ: ‘ಇಂದು ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧಕರಾಗಿ ಹೊರಹೊಮ್ಮಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚಿದೆ’ ಎಂದು ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.

‘ವೃತ್ತಿಯಲ್ಲಿ ಎಂದೂ ದ್ರೋಹ ಮಾಡಲಿಲ್ಲ. ಪ್ರಾಮಾಣಿಕವಾಗಿ ಕೈಲಾದಷ್ಟು ಸೇವೆ ಮಾಡಿದ್ದೇನೆ. ವೃತ್ತಿ ಬದುಕಿಗೆ ಧಕ್ಕೆ ಬರುವಂತಹ ಸಂದರ್ಭದಲ್ಲಿ ಕೆಲವರೊಂದಿಗೆ ನಿಷ್ಠೂರವಾಗಿ ನಡೆದುಕೊಂಡಿದ್ದೇನೆ’ ಎಂದು ಹೇಳಿದರು.

ತಾಲ್ಲೂಕು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಗೋಪಿಕೃಷ್ಣನ್, ಉಪನ್ಯಾಸಕ ಮಂಜುನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ರತ್ನಪ್ಪ ಮೇಲಾಂಗಣಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.