ADVERTISEMENT

ಸಾಲ ಮಂಜೂರಿಗೆ ಮಾ.31ರ ಗಡುವು

ಸಭೆಯಲ್ಲಿ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಜಿ.ಪಂ ಸಿಇಒ ಜಗದೀಶ್‌ ಕೆಂಡಾಮಂಡಲ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 14:05 IST
Last Updated 21 ಮಾರ್ಚ್ 2019, 14:05 IST
ಕೋಲಾರದಲ್ಲಿ ಗುರುವಾರ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಜಿ.ಪಂ ಸಿಇಒ ಜಿ.ಜಗದೀಶ್‌ ಮಾತನಾಡಿದರು.
ಕೋಲಾರದಲ್ಲಿ ಗುರುವಾರ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಜಿ.ಪಂ ಸಿಇಒ ಜಿ.ಜಗದೀಶ್‌ ಮಾತನಾಡಿದರು.   

ಕೋಲಾರ: ‘ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಮಾರ್ಚ್‌ 31ರೊಳಗೆ ಸಾಲ ಮಂಜೂರು ಮಾಡದಿದ್ದರೆ ಬ್ಯಾಂಕ್‌ಗಳನ್ನು ಜಿಲ್ಲೆಯಿಂದ ಎತ್ತಂಗಡಿ ಮಾಡಲು ಸರ್ಕಾರಕ್ಕೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಶಿಫಾರಸ್ಸು ಮಾಡುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (ಪಿಎಂಇಜಿಪಿ), ಮುಖ್ಯಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (ಸಿಎಂಇಜಿಪಿ) ಸೇರಿದಂತೆ ವಿವಿಧ ಯೋಜನೆಗಳಡಿ ಸಾಲ ನೀಡಲು ಫಲಾನುಭವಿಗಳನ್ನು ಗುರುತಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿತ್ತು. ಆದರೆ, ಫಲಾನುಭವಿ ಗುರುತಿಸಿಲ್ಲ. ಸಾಲ ನೀಡಲು ಏನು ಸಮಸ್ಯೆ?’ ಎಂದು ಪ್ರಶ್ನಿಸಿದರು.

‘ಪಿಎಂಇಜಿಪಿಯಲ್ಲಿ 75 ಅರ್ಜಿಗಳ ಪೈಕಿ 11 ಮಂದಿಗೆ ಹಾಗೂ ಸಿಎಂಇಜಿಪಿಯಲ್ಲಿ 67 ಅರ್ಜಿಗಳ ಪೈಕಿ 40 ಮಂದಿಗೆ ಸಾಲ ನೀಡಲಾಗಿದೆ. ಬಡವರಿಗೆ, ರೈತರಿಗೆ ಸಾಲ ಕೊಡದೆ ದೇಶ ಬಿಟ್ಟು ಓಡಿ ಹೋಗುವವರಿಗೆ ಸಾಲ ಕೊಡುತ್ತೀರಾ?’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಬ್ಯಾಂಕ್‌ ಅಧಿಕಾರಿಗಳು ಮಾಡುವ ತಪ್ಪಿಗೆ ಜನ ಸರ್ಕಾರಿ ಇಲಾಖಾಧಿಕಾರಿಗಳನ್ನು ದೂರುತ್ತಾರೆ. ನಿಮ್ಮಿಂದ ಸಮಾಜಕ್ಕೆ ಅನುಕೂಲವಿಲ್ಲ. ಬಡ ಜನರಿಗೆ ಸಾಲ ಸೌಲಭ್ಯ ಕಲ್ಪಿಸದೆ ಠೇವಣಿ ಪಡೆದುಕೊಂಡು ಹೋಗಲು ಬಂದಿದ್ದೀರಾ’ ಎಂದು ಕಿಡಿಕಾರಿದರು.

‘ಬಡವರಿಗೆ ಆರ್ಥಿಕ ನೆರವು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ಸಾಲ, ಸಹಾಯಧನ ಮಂಜೂರು ಮಾಡಿ ಬ್ಯಾಂಕ್‌ಗಳ ಮೂಲಕ ವಿತರಿಸುತ್ತಿವೆ. ಆಯಾ ಇಲಾಖೆ ಅಧಿಕಾರಿಗಳು ಫಲಾನುಭವಿಗಳನ್ನು ಗುರುತಿಸಿ ಬ್ಯಾಂಕ್‌ಗಳಿಗೆ ಪಟ್ಟಿ ಸಲ್ಲಿಸಿದರೆ ಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದೀರಿ. ಇದರಿಂದ ನಿಮಗೇನು ಲಾಭ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನಸ್ಥಿತಿ ಬದಲಾಗಬೇಕು: ‘ಬ್ಯಾಂಕ್‌ಗಳ ವ್ಯವಸ್ಥಾಪಕರ ಮನಸ್ಥಿತಿ ಬದಲಾಗಬೇಕು. ನಿಮ್ಮ ಜೇಬಿನಿಂದ ಸಾಲ ಕೊಡುವುದಿಲ್ಲ. ಸಾರ್ವಜನಿಕರಿಂದ ಠೇವಣಿ ಪಡೆಯುವುದರ ಜತೆಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಸಾಲಕ್ಕಾಗಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡದ ಸಂಬಂಧ ಸಾಕಷ್ಟು ದೂರು ಬಂದಿವೆ. ಭೌತಿಕ ಗುರಿಯಲ್ಲಿ ಶೇ 50ರಷ್ಟು ಸಾಧನೆಯಾಗದಿದ್ದರೆ ಏನರ್ಥ?’ ಎಂದು ಕೆಂಡಾಮಂಡಲರಾದರು.

‘ಸಕಾಲಕ್ಕೆ ಸಾಲ ನೀಡದಿದ್ದರೆ ಫಲಾನುಭವಿಗಳ ಸಬ್ಸಿಡಿ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ. ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ಸುಮ್ಮನೆ ಅಲ್ಮೆರಾದಲ್ಲಿ ಅರ್ಜಿ ಇಟ್ಟುಕೊಂಡಿದ್ದರೆ ಏನು ಪ್ರಯೋಜನ. ಹಿಂದಿನ ಸಭೆಯಲ್ಲೂ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು, ಆದರೂ ಗುರಿ ತಲುಪಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಹಚಾರ ಕಾದಿದೆ: ‘ಸರ್ಕಾರದ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬ ಬಗ್ಗೆ ಸರ್ಕಾರದ ಕಾರ್ಯದರ್ಶಿ ಸಭೆಯಲ್ಲಿ ಉತ್ತರ ಕೊಡಲು ಅಗುತ್ತಿಲ್ಲ. ಉದ್ಯಮಿಗಳಿಗೆ ಸಾಲ ಕೊಡಿ ಎಂದು ಹೇಳುತ್ತಿಲ್ಲ. ಅಧಿಕಾರಿಗಳು ಆರ್‌ಬಿಐ ಆದೇಶ ಪಾಲಿಸದಿದ್ದರೆ ಮತ್ತೇನು ಕೆಲಸ ಮಾಡುತ್ತೀರಿ? ಸಭೆಗಳಲ್ಲಿ ಹೇಳಿ ಹೇಳಿ ಸಾಕಾಗಿದೆ. ಮಾರ್ಚ್ 31ರೊಳಗೆ ಸಾಲ ವಿತರಣೆ ಭೌತಿಕ ಗುರಿ ಸಾಧಿಸದಿದ್ದರೆ ನಿಮಗೆ ಗ್ರಹಚಾರ ಕಾದಿದೆ’ ಎಂದು ಗುಡುಗಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸರಾವ್, ಅಫೆಕ್ಸ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜ್, ಭಾರತೀಯ ಸ್ಟೇಟ್‌ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ವಸಂತ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.