ADVERTISEMENT

ನಿವೃತ್ತರಿಗೆ ಸಕಾಲಕ್ಕೆ ಪಿಂಚಣಿ ತಲುಪಿಸಿ

ಅದಾಲತ್‌ನಲ್ಲಿ ಬ್ಯಾಂಕ್‌– ಖಜಾನೆ ಅಧಿಕಾರಿಗಳಿಗೆ ಡಿ.ಸಿ ಮಂಜುನಾಥ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 15:16 IST
Last Updated 23 ಆಗಸ್ಟ್ 2019, 15:16 IST
ಕೋಲಾರದಲ್ಲಿ ಶುಕ್ರವಾರ ನಡೆದ ಪಿಂಚಣಿ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ನಿವೃತ್ತ ಸರ್ಕಾರಿ ನೌಕರರ ಅಹವಾಲು ಆಲಿಸಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಪಿಂಚಣಿ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ನಿವೃತ್ತ ಸರ್ಕಾರಿ ನೌಕರರ ಅಹವಾಲು ಆಲಿಸಿದರು.   

ಕೋಲಾರ: ‘ನಿವೃತ್ತ ನೌಕರರು ಪಿಂಚಣಿ ಸೌಲಭ್ಯ ಪಡೆಯಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಬ್ಯಾಂಕ್ ಮತ್ತು ಖಜಾನೆ ಅಧಿಕಾರಿಗಳು ಎಚ್ಚೆತ್ತು ಫಲಾನುಭವಿಗಳಿಗೆ ಸಕಾಲಕ್ಕೆ ಪಿಂಚಣಿ ತಲುಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ನಿವೃತ್ತ ನೌಕರರ ಪಿಂಚಣಿ ಅದಾಲತ್‌ನಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪಿಂಚಣಿ ಅದಾಲತ್ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ನಿವೃತ್ತ ನೌಕರರ ಕುಂದು ಕೊರತೆ ಸಭೆ ಕರೆಯಲಾಗಿದ್ದು, ಪಿಂಚಣಿ ಸಂಬಂಧ ಬ್ಯಾಂಕ್ ಮತ್ತು ಖಜಾನೆ ಸಮಸ್ಯೆ ಹೇಳಿಕೊಂಡಿದ್ದಾರೆ’ ಎಂದರು.

‘ಯಂತ್ರೋಪಕರಣ ದುರಸ್ತಿಯಲ್ಲೂ ವಿಳಂಬವಾಗುತ್ತಿದೆ ಎಂದು ನೌಕರರು ದೂರಿದ್ದಾರೆ. ಪಿಂಚಣಿ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು. ತಿಂಗಳ ಅಂತ್ಯದಲ್ಲಿ ಅಥವಾ ಮೊದಲ ವಾರದಲ್ಲಿ ಸಕಾಲಕ್ಕೆ ಪಿಂಚಣಿ ಸೌಲಭ್ಯ ನೀಡಬೇಕು’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ADVERTISEMENT

‘85 ವರ್ಷ ಮೀರಿದ ನಿವೃತ್ತ ನೌಕರರ ಬಾಕಿ ವೇತನ ಶೀಘ್ರವೇ ಪಾವತಿಸಬೇಕು. ಶೇ 20ರಷ್ಟು ವೇತನ ಪರಿಷ್ಕರಣೆ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಅಧಿಕಾರಿಗಳು ಇಲಾಖೆಯವರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಕೇಂದ್ರ ಸರ್ಕಾರ ಎಸ್‌ಬಿಐ, ಸಿಂಡಿಕೇಟ್, ಕಾರ್ಪೋರೇಷನ್, ಕೆನರಾ ಹಾಗೂ ವಿಜಯಾ ಬ್ಯಾಂಕ್‌ಗೆ ಮಾತ್ರ ಪಿಂಚಣಿ ನೀಡುವಂತೆ ಆದೇಶ ಮಾಡಿದೆ. ಹೀಗಾಗಿ ಈ ಬ್ಯಾಂಕ್‌ಗಳಲ್ಲೇ ಪಿಂಚಣಿ ನೀಡಲಾಗುವುದು. ಕೆಲವರು ಎಸ್‌ಬಿಐ ಬದಲು ಬ್ಯಾಂಕ್ ಆಫ್ ಬರೋಡಾಗೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಅದಕ್ಕೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹೋಬಳಿವಾರು ಸಭೆ: ‘ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನಕ್ಕೆ ಸಂಬಂಧಿಸಿದಂತೆ ಹೋಬಳಿವಾರು ಸಭೆ ಕರೆದು ಅಹವಾಲು ಆಲಿಸಲಾಗುತ್ತಿದೆ. ಅದೇ ರೀತಿ ತಾಲ್ಲೂಕು ಮಟ್ಟದಲ್ಲಿ ನಿವೃತ್ತ ನೌಕರರಿಗಾಗಿ 2 ತಿಂಗಳಿಗೊಮ್ಮೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

‘ನಾನು ಸಹ ಭವಿಷ್ಯದಲ್ಲಿ ನಿವೃತ್ತಿಯಾಗಿ ಪಿಂಚಣಿ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಹೇಳಿದರು.

ಹೋರಾಟ ನಡೆಸುತ್ತೇವೆ: ‘ಜಿಲ್ಲೆಯಾದ್ಯಂತ ನಿವೃತ್ತ ನೌಕರರಿಗೆ ಎಲ್ಲಾ ಬ್ಯಾಂಕ್‌ಗಳು ಮತ್ತು ಖಜಾನೆಯಲ್ಲಿ ಸಮಸ್ಯೆಯಾಗುತ್ತಿದೆ. ಯಾರೂ ಸಹ ನಿವೃತ್ತ ನೌಕರರ ಸಮಸ್ಯೆ ಕೇಳುತ್ತಿಲ್ಲ. ಅನೇಕರಿಗೆ ಸಾಕಷ್ಟು ವಯಸ್ಸಾಗಿದೆ ಎಂಬುದನ್ನು ಅರಿಯದೆ ಅಲೆದಾಡಿಸುತ್ತಿದ್ದಾರೆ. ವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮರೆಡ್ಡಿ ಎಚ್ಚರಿಕೆ ನೀಡಿದರು.

‘ನನ್ನ ಮಾವನಿಗೆ 85 ವರ್ಷ ವಯಸ್ಸಾಗಿದ್ದು, ಸಾಲಿನಲ್ಲಿ ನಿಂತು ಪಿಂಚಣಿ ಪಡೆಯಲಾಗುತ್ತಿಲ್ಲ. ಎಸ್‌ಬಿಐ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ನವರಿಗೆ ನಮ್ಮ ಕಷ್ಟ ಗೊತ್ತಾಗುತ್ತಿಲ್ಲ. ಸಾಲ ಕೊಡಲು ವಿಳಂಬ ಮಾಡುತ್ತಿದ್ದಾರೆ. ದಯವಿಟ್ಟು ಬರೋಡಾ ಬ್ಯಾಂಕ್‌ನಲ್ಲಿ ಪಿಂಚಣಿ ಪಾವತಿಸಿ’ ಎಂದು ಗಿರಿಜಾ ಎಂಬುವರು ಮನವಿ ಮಾಡಿದರು.

‘ಎಸ್‌ಬಿಐ ಬ್ಯಾಂಕ್‌ನಲ್ಲಿ ಸಾಕಷ್ಟು ಸಮಸ್ಯೆ ಇವೆ. ಅಲ್ಲಿನ ಕಂಪ್ಯೂಟರ್‌ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಸಿಬ್ಬಂದಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಾರೆ. ಬ್ಯಾಂಕ್‌ಗಳಲ್ಲಿ ಕೂರಲು ಜಾಗವಿಲ್ಲ. ಪ್ರತ್ಯೇಕ ಕೌಂಟರ್ ತೆರೆದು ವ್ಯವಸ್ಥೆ ಸರಿಪಡಿಸಬೇಕು’ ಎಂದು ಮಾಲೂರಿನ ನಿವೃತ್ತ ಸರ್ಕಾರಿ ನೌಕರ ಎಂ.ಆರ್.ವೆಂಕಟೇಶ್ ಕೋರಿದರು.

ಯಾರು ಗತಿ: ‘ಶ್ರೀನಿವಾಸಪುರದ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಸಮರ್ಪಕವಾಗಿ ಹಣ ಸಿಗುತ್ತಿಲ್ಲ. ಕುಳಿತುಕೊಳ್ಳಲು ಜಾಗವಿಲ್ಲ. ಬ್ಯಾಂಕ್‌ನ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ಸಿಬ್ಬಂದಿ ಯಾವುದಕ್ಕೂ ಸ್ಪಂದಿಸುತ್ತಿಲ್ಲ. 82 ವರ್ಷ ವಯಸ್ಸಿನ ನನಗೆ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ನನಗೆ ಏನಾದರೂ ತೊಂದರೆಯಾದರೆ ಯಾರು ಗತಿ’ ಎಂದು ನಿವೃತ್ತ ಸರ್ಕಾರಿ ನೌಕರ ಶ್ರೀನಿವಾಸರೆಡ್ಡಿ ಅಳಲು ತೋಡಿಕೊಂಡರು.

ತಹಶೀಲ್ದಾರ್‌ ನಾಗವೇಣಿ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.