ADVERTISEMENT

ಕಾಂಗ್ರೆಸ್ ನಾಯಕರ ಒಗ್ಗಟ್ಟು ಪ್ರದರ್ಶನ

ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಶಾಸಕ ಕೆ.ಆರ್‌. ರಮೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:02 IST
Last Updated 5 ಡಿಸೆಂಬರ್ 2021, 5:02 IST
ಮಾಲೂರು ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಶಾಸಕ ಕೆ.ಆರ್. ರಮೇಶ್ ಕುಮಾರ್ ಉದ್ಘಾಟಿಸಿದರು. ಶಾಸಕರಾದ ಕೃಷ್ಣ ಬೈರೇಗೌಡ, ಕೆ.ವೈ. ನಂಜೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಶಿವಶಂಕರರೆಡ್ಡಿ, ಕೆ.ವೈ. ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ಅನಿಲ್ ಕುಮಾರ್ ಹಾಜರಿದ್ದರು
ಮಾಲೂರು ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಶಾಸಕ ಕೆ.ಆರ್. ರಮೇಶ್ ಕುಮಾರ್ ಉದ್ಘಾಟಿಸಿದರು. ಶಾಸಕರಾದ ಕೃಷ್ಣ ಬೈರೇಗೌಡ, ಕೆ.ವೈ. ನಂಜೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಶಿವಶಂಕರರೆಡ್ಡಿ, ಕೆ.ವೈ. ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ಅನಿಲ್ ಕುಮಾರ್ ಹಾಜರಿದ್ದರು   

ಮಾಲೂರು: ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ನಡೆದ ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು, ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು.

ಶಾಸಕ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಜನತೆಗೆ ಬೆಡ್, ಆಮ್ಲಜನಕ ಸೇರಿದಂತೆ ಕನಿಷ್ಠ ವೈದ್ಯಕೀಯ ಸೌಲಭ್ಯ ಒದಗಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ’ ಎಂದು ಟೀಕಿಸಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತದಿಂದ ಜನತೆ ತತ್ತರಿಸಿದ್ದಾರೆ. ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ನೋಟು ಅಮಾನ್ಯದ ಪರಿಣಾಮ ಎಷ್ಟು ಕಪ್ಪುಹಣವನ್ನು ಪತ್ತೆ ಹಚ್ಚಿತು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರಿಸಬೇಕು ಎಂದರು.

ADVERTISEMENT

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹಸಿವು ಮುಕ್ತಗೊಳಿಸಲು ಉಚಿತವಾಗಿ ಅಕ್ಕಿ ವಿತರಣೆ ಯೋಜನೆಯನ್ನು ಜಾರಿಗೊಳಿಸಿತ್ತು. ಬಡವರ ಬಗ್ಗೆ ಕಾಳಜಿ ಹೊಂದಿರುವ ಕಾಂಗ್ರೆಸ್ ಅನ್ನು ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಜನತೆ ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಕೆರೆಗಳನ್ನು ತುಂಬಿಸಲು ಕೆ.ಸಿ. ವ್ಯಾಲಿ ಯೋಜನೆಯನ್ನು ಜಾರಿಗೊಳಿಸಿತು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಕೈ ಹಿಡಿದಿದೆ. ರೈತರು ಬೆಳೆಯುವ ಹೂ, ಹಣ್ಣು ಮತ್ತು ತರಕಾರಿಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ಮಾರುಕಟ್ಟೆ ಕಲ್ಪಿಸಲು ಕಾಂಗ್ರೆಸ್ ಪಕ್ಷ ಯೋಜನೆಯನ್ನು ರೂಪಿಸುತ್ತಿದೆ ಎಂದರು.

ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಕೋಲಾರ ಜಿಲ್ಲೆಯಲ್ಲಿ ಅನಿಲ್ ಕುಮಾರ್ ಗೆಲುವಿಗೆ ಪಕ್ಷದ ಕಾರ್ಯಕರ್ತರು, ಗ್ರಾಮ ಪಂಚಾಯಿತಿ, ನಗರಸಭೆ ಮತ್ತು ಪುರಸಭಾ ಸದಸ್ಯರು ಮತ ಚಲಾಯಿಸಬೇಕು ಎಂದು ಕೋರಿದರು.

ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜಕೀಯ ಭಿನ್ನಾಭಿಪ್ರಾಯ ಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಯಾಗಿದೆ. ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು ಒಗ್ಗಟ್ಟಾಗಿದ್ದರೆ ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಒಗ್ಗಟ್ಟನ್ನು ಪ್ರದರ್ಶಿಸಿದರೆ ಜನಪರ ಕೆಲಸಗಳು ಮಾಡಲು ಸಾಧ್ಯವಾಗುತ್ತದೆ ಎಂದರು.

ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ವಿಧಾನ ಪರಿಷತ್ ಚುನಾವಣೆಯು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ತಾಲ್ಲೂಕಿನ 21 ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. 400ಕ್ಕೂ ಹೆಚ್ಚು ಗ್ರಾ.ಪಂ., ಪುರಸಭಾ ಸದಸ್ಯರು ಅನಿಲ್ ಕುಮಾರ್ ಅವರಿಗೆ ಮತ ಚಲಾವಣೆ ಮಾಡಲಿದ್ದಾರೆ ಎಂದು
ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಮಾಜಿ ಸಭಾಪತಿ ಶಿವಶಂಕರ ರೆಡ್ಡಿ, ಶಾಸಕರಾದ ಕೆ.ವೈ. ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಶಾಸಕರಾದ ಕೊತ್ತೂರು ಮಂಜು, ಸುಧಾಕರ್, ಎ. ನಾಗರಾಜು, ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿದರು.

ಸಭೆಯಲ್ಲಿ ಕೆಪಿಸಿಸಿ ಸದಸ್ಯ ಶ್ರೀಲಕ್ಷ್ಮೀನಾರಾಯಣ, ಎಂ. ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಅಧ್ಯಕ್ಷ ಟಿ.ಎಂ. ಅಶೋಕ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಿ. ಮಧುಸೂದನ್, ಎಚ್‌.ಎಂ. ವಿಜಯನರಸಿಂಹ, ಪ್ರಧಾನ ಕಾರ್ಯದರ್ಶಿ ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷೆ ಭಾರತಮ್ಮ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುನಿರಾಜು, ಎಂ.ವಿ. ಹನುಮಂತಯ್ಯ, ವೆಂಕಟೇಶ್ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.