ADVERTISEMENT

ಬಡಾವಣೆಗಳಲ್ಲಿ ವಿಪರೀತ ಸೊಳ್ಳೆ:ನಗರವಾಸಿಗಳ ನಿದ್ದೆಗೆಡಿಸಿದ ಡೆಂಗಿ,ಚಿಕುನ್‌ ಗುನ್ಯ

ಮುಖ ತೋರಿಸಿ ಮರೆಯಾದ ವರುಣದೇವ

ಜೆ.ಆರ್.ಗಿರೀಶ್
Published 19 ಮೇ 2019, 19:33 IST
Last Updated 19 ಮೇ 2019, 19:33 IST
ಕೋಲಾರದ ಗಾಂಧಿವನದ ಬಳಿ ರಸ್ತೆ ಬದಿಯಲ್ಲಿ ರಾಶಿಯಾಗಿ ಬಿದ್ದಿರುವ ಕಸ.
ಕೋಲಾರದ ಗಾಂಧಿವನದ ಬಳಿ ರಸ್ತೆ ಬದಿಯಲ್ಲಿ ರಾಶಿಯಾಗಿ ಬಿದ್ದಿರುವ ಕಸ.   

ಕೋಲಾರ: ನಗರದಲ್ಲಿ ವರುಣದೇವ ಮುಖ ತೋರಿಸಿ ಮರೆಯಾದ ಬೆನ್ನಲ್ಲೇ ಜನರಲ್ಲಿ ಡೆಂಗಿ ಹಾಗೂ ಚಿಕುನ್‌ ಗುನ್ಯ ಕಾಯಿಲೆಯ ಆತಂಕ ಮನೆ ಮಾಡಿದೆ.

ನಗರದಲ್ಲಿ ಕಳೆದೊಂದು ವಾರದಲ್ಲಿ ಮೂರ್ನಾಲ್ಕು ಬಾರಿ ಮಳೆಯಾಗಿದ್ದು, ಗುಂಡಿ, ಚರಂಡಿ ಹಾಗೂ ಕೊಳಚೆ ಪ್ರದೇಶದಲ್ಲಿ ನೀರು ನಿಂತು ನೈರ್ಮಲ್ಯ ಸಮಸ್ಯೆ ಎದುರಾಗಿದೆ. ರಸ್ತೆಗಳ ಬದಿಯಲ್ಲಿ ವಿಲೇವಾರಿಯಾಗದೆ ಬಿದ್ದಿರುವ ತ್ಯಾಜ್ಯದ ಜತೆ ಮಳೆ ನೀರು ಸೇರಿ ಕಸ ಸ್ಥಳದಲ್ಲೇ ಕೊಳೆಯಲಾರಂಭಿಸಿದೆ.

ಯುಜಿಡಿ ಮತ್ತು ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ಮಲಮೂತ್ರ, ಕೊಳಚೆ ನೀರು ಹೊರಗೆ ಹರಿಯುತ್ತಿದೆ. ಇದರಿಂದ ಬಡಾವಣೆಗಳಲ್ಲಿ ಸೊಳ್ಳೆ ಕಾಟ ಹೆಚ್ಚಿದ್ದು, ಜನರಿಗೆ ಜ್ವರ, ಶೀತ, ತಲೆನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವಿನ ಲಕ್ಷಣ ಕಾಣಿಸಿಕೊಂಡಿದೆ. ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರಲ್ಲೂ ಜ್ವರ ಕಾಣಿಸಿಕೊಂಡಿದೆ.

ADVERTISEMENT

ಜ್ವರದಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಏರುಗತಿಯಲ್ಲಿ ಸಾಗಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಜಿಲ್ಲಾ ಕಣ್ಗಾವಲು ಘಟಕ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಬಡಾವಣೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಅಲ್ಲದೇ, ಅನಾರೋಗ್ಯಪೀಡಿತರ ರಕ್ತಮಾದರಿ ಸಂಗ್ರಹಿಸಿ ಡೆಂಗಿ ಮತ್ತು ಚಿಕುನ್‌ ಗುನ್ಯ ಸೋಂಕಿನ ಬಗ್ಗೆ ತಪಾಸಣೆ ಮಾಡುತ್ತಿದ್ದಾರೆ.

ಲಕ್ಷಣಗಳು: ಈಡಿಸ್‌ ಇಜಿಫ್ಟ್‌ ಎಂಬ ಸೊಳ್ಳೆಯಿಂದ ಡೆಂಗಿ ಜ್ವರ ಬರುತ್ತದೆ. ಸೋಂಕುಪೀಡಿತವಾದ ಈ ಸೊಳ್ಳೆಯು ಕಚ್ಚುವುದರಿಂದ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆಯು ಮನುಷ್ಯರಿಗೆ ಹಗಲು ವೇಳೆಯಲ್ಲಿ ಕಚ್ಚುತ್ತದೆ. ಇನ್ನು ಚಿಕುನ್‌ ಗುನ್ಯ ಕಾಯಿಲೆಯು ವೈರಸ್‌ನಿಂದ ಬರುತ್ತದೆ.

ತೀವ್ರ ಜ್ವರ, ತಲೆನೋವು, ಶೀತ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಈ ಕಾಯಿಲೆಗಳ ಪ್ರಮುಖ ಲಕ್ಷಣಗಳಾಗಿವೆ. ಜ್ವರದ ತೀವ್ರತೆ ಜಾಸ್ತಿಯಾದರೆ ಬಾಯಿ, ಮೂಗು, ಚರ್ಮ ಮತ್ತು ಒಸಡುಗಳಲ್ಲಿ ರಕ್ತಸ್ರಾವವಾಗುತ್ತದೆ.

ಹತೋಟಿ ವಿಧಾನ: ಸೊಳ್ಳೆಗಳ ನಿಯಂತ್ರಣವು ಡೆಂಗಿ ಮತ್ತು ಚಿಕುನ್‌ ಗುನ್ಯ ಕಾಯಿಲೆ ಹತೋಟಿಗೆ ಮುಖ್ಯ ವಿಧಾನ. ಮನೆಯ ಸಿಮೆಂಟ್‌ ತೊಟ್ಟಿ, ಡ್ರಮ್‌ ಹಾಗೂ ಮಡಿಕೆಯಲ್ಲಿ ಶೇಖರಿಸಿಟ್ಟಿರುವ ನೀರಿನಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಜತೆಗೆ ಮನೆಯ ಸುತ್ತಲಿನ ಚರಂಡಿ ಹಾಗೂ ಗುಂಡಿಗಳಲ್ಲಿ ನಿಂತಿರುವ ನೀರಿನಲ್ಲೂ ಸೊಳ್ಳೆಗಳ ಸಂತಾನೋತ್ಪತ್ತಿ ನಡೆಯುತ್ತದೆ.

ಆದ ಕಾರಣ ಸಿಮೆಂಟ್‌ ತೊಟ್ಟಿ, ಡ್ರಮ್‌ ಮತ್ತು ಮಡಿಕೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬಿಸಬೇಕು. ಅದೇ ರೀತಿ ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಸ್ವಚ್ಛತೆಯ ಅರಿವು: ಡೆಂಗಿ, ಚಿಕುನ್‌ ಗುನ್ಯ ಪ್ರಕರಣಗಳ ತಡೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ. ಪ್ಲಾಸ್ಟಿಕ್‌ ಡ್ರಮ್‌, ಮನೆಯ ತೊಟ್ಟಿಗಳಲ್ಲಿನ ನೀರನ್ನು ಖಾಲಿ ಮಾಡಿ ವಾರದಲ್ಲಿ ಒಮ್ಮೆಯಾದರೂ ಒಣಗಲು ಬಿಡುವಂತೆ ತಿಳಿ ಹೇಳುತ್ತಿದ್ದಾರೆ.

ಸೊಳ್ಳೆಗಳ ನಿಯಂತ್ರಣಕ್ಕೆ ನಗರಸಭೆ ವತಿಯಿಂದ ಆಗಾಗ್ಗೆ ರಾಸಾಯನಿಕ ಹೊಗೆ ಸಿಂಪಡಣೆ (ಫಾಗಿಂಗ್‌) ಮಾಡಬೇಕು. ಆದರೆ, ನಗರಸಭೆಯಲ್ಲಿನ ಫಾಗಿಂಗ್‌ ವಾಹನ ಕೆಟ್ಟು ಮೂಲೆ ಸೇರಿದೆ. ಹಿಂದಿನ ವರ್ಷ ಗುತ್ತಿಗೆ ಆಧಾರದಲ್ಲಿ ಫಾಗಿಂಗ್‌ ಮಾಡಿದ್ದ ಗುತ್ತಿಗೆದಾರರಿಗೆ ನಗರಸಭೆಯು ಬಿಲ್‌ ಪಾವತಿಸಿಲ್ಲ. ಹೀಗಾಗಿ ಗುತ್ತಿಗೆದಾರರು ಫಾಗಿಂಗ್‌ ಮಾಡಲು ಹಿಂದೇಟು ಹಾಕುತ್ತಿದ್ದು, ನಗರಸಭೆಯ ಹೊಣೆಗೇಡಿತನಕ್ಕೆ ನಗರವಾಸಿಗಳು ಬವಣೆ ಪಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.