ADVERTISEMENT

ಶೋಷಿತರ ಪರ ನಿಂತ ದೇವನೂರು ಸಾಹಿತ್ಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 5:00 IST
Last Updated 1 ಮಾರ್ಚ್ 2021, 5:00 IST
ಕೋಲಾರದಲ್ಲಿ ಭಾನುವಾರ ನಡೆದ ಓದುಗ ಕೇಳುಗ ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಸ.ರಘುನಾಥ್‌ ಮಾತನಾಡಿದರು
ಕೋಲಾರದಲ್ಲಿ ಭಾನುವಾರ ನಡೆದ ಓದುಗ ಕೇಳುಗ ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಸ.ರಘುನಾಥ್‌ ಮಾತನಾಡಿದರು   

ಕೋಲಾರ: ಮಾತನಾಡುವಂತೆ ಮಾಡುವುದು ದೇವನೂರು ಮಹಾದೇವ ಸಾಹಿತ್ಯ ರಚನೆಯ ಪ್ರಕಾರಗಳಾಗಿವೆ. ಅವರು ತಮ್ಮ ಆಲೋಚನೆಗಳನ್ನು ಜನ ಸಮುದಾಯಕ್ಕೆ ನೇರವಾಗಿ ತಲುಪಿಸುವ ಲೇಖಕರಾಗಿದ್ದಾರೆ ಎಂದು ಸಾಹಿತಿ ಸ.ರಘುನಾಥ್ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ‘ಓದುಗ ಕೇಳುಗ ನಮ್ಮ ನಡೆ’ ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ ಕೃತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಳ ಸಮುದಾಯದ ಮತ್ತು ಶೋಷಣೆಗೆ ಒಳಗಾದವರ ಮೇಲೆ ನಡೆದ ದಬ್ಬಾಳಿಕೆಗಳನ್ನು ತಮ್ಮ ಸಾಹಿತ್ಯ ರಚನೆಯ ಮೂಲಕ ಸಮಾಜವನ್ನು ಅವರು ಎಚ್ಚರಿಸುವ ಪ್ರಯತ್ನ ಮಾಡಿದರು. ಇಂತಹ ಸಾಹಿತ್ಯವನ್ನು ಯುವಕರು ಓದಬೇಕು ಎಂದರು.

ADVERTISEMENT

ಪ್ರಸ್ತುತ ನಮ್ಮನ್ನು ಆಳುತ್ತಿರುವ ಸರ್ಕಾರಗಳು ಏಜೆಂಟರ ಮೂಲಕ ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿವೆ. ಇಂತಹ ಸರ್ಕಾರಗಳ ನಡವಳಿಕೆಗಳನ್ನು ದೇವನೂರು ಅವರು ಖಂಡಿಸಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ ಸ್ವರೂಪಗಳನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಶೋಷಿತರ ಪರವಾಗಿ ತನ್ನ ಅಭಿಪ್ರಾಯಗಳನ್ನು ನಿಷ್ಠುರವಾಗಿ ಪ್ರಕಟಿಸುತ್ತಿದ್ದಾರೆ ಎಂದು ರಘುನಾಥ್‌ ಹೇಳಿದರು.

ಕನ್ನಡ ಪ್ರಾಧ್ಯಾಪಕ ಡಾ.ಸರ್ವೇಶ್ ಬಂಟಹಳ್ಳಿ ಮಾತನಾಡಿ, ಸೃಜನಶೀಲ ಬರವಣಿಗೆ ಮೂಲಕ ಸಮಾಜದ ಎಲ್ಲ ವರ್ಗದವರು ತಮ್ಮ ಕೃತಿಯನ್ನು ಓದುವಂತೆ ದೇವನೂರು ಅವರು ಪ‍್ರೇರೇಪಿಸಿದ್ದಾರೆ. ಮನುಷ್ಯ ಸಮಾನತೆಯ ಕನಸು ಕಾಣುವುದು ಬದುಕು ತೋರಿಸುವುದು ಮುಖ್ಯವಾಗಿದೆ. ಸಮಾಜದ ದಾಸ್ಯಗಳನ್ನು ಸರಿಮಾಡುವುದೇ ಇವರ ಸಾಹಿತ್ಯದ ಉದ್ದೇಶವಾಗಿದೆ. ಒಳಮೀಸಲಾತಿ ಇತ್ಯಾದಿಗಳ ಬಗ್ಗೆ ಯುವ ಸಮುದಾಯವು ಬದಲಾವಣೆಗಳನ್ನು ತರುವ ನಿಟ್ಟಿನ ಸಾಹಿತ್ಯಕ್ಕೆ ಆದ್ಯತೆ ನೀಡಿದ್ದಾರೆ ಎಂದರು.

ಮನುಷ್ಯನ ಆಹಾರ ಪದ್ಧತಿಯನ್ನು ಪ್ರಶ್ನಿಸುವವರವಿರುದ್ಧ ಕಾರ್ಪೋರೇಟ್‌ ಸಂಸ್ಥೆಗಳ ಪರವಾಗಿ ಸರ್ಕಾರ ಕಾನೂನು ತರುತ್ತಿದೆ. ಸಮಾಜದ ಓರೆ ಕೊರೆಗಳನ್ನು ತಿದ್ದಿ ತೀಡುವ ಕೆಲಸವನ್ನು ಸಾಹಿತಿಗಳು ಮಾಡುತ್ತಿದ್ದಾರೆ. ಇದನ್ನು ಸಹಿಸದ ಆಳುವ ಸರ್ಕಾರಗಳು ಸಾಹಿತಿಗಳ ಬರವಣಿಗೆಯ ಶಕ್ತಿಯನ್ನು ಕುಂದಿಸುವ ಕೆಲಸವನ್ನು ಮಾಡುತ್ತಿವೆ. ಆದರೆ ಯುವ ಸಾಹಿತಿಗಳು ಇದಕ್ಕೆ ಅಂಜದೆ ತಮಗೆ ಗೋಚರವಾಗುವ ವಿಷಯಗಳನ್ನು ಹೊರಕ್ಕೆ ತೆಗೆದು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಈ ವಿಚಾರದಲ್ಲಿ ದೇವನೂರ ಮಹದೇವ್ ಅವರು ಎಲ್ಲರಿಗೂ ಮಾದರಿ ಎನಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್, ಮುಖಂಡ ಸಿ.ಎಂ ಮುನಿಯಪ್ಪ, ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಹ.ಮಾ.ರಾಮಚಂದ್ರ, ರಂಗಕರ್ಮಿ ನಾವೆಂಕಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.