
ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಂಥಾಲಯಕ್ಕೆ ನಾಮಫಲಕ ಅಳವಡಿಸದಿರುವುದು
ಮುಳಬಾಗಿಲು: ತಾಲ್ಲೂಕಿನಲ್ಲಿರುವ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳನ್ನು ರಾಜ್ಯ ಸರ್ಕಾರ ಡಿಜಿಟಲೀಕರಣ ಮಾಡಿ ಓದುಗರಿಗೆ ಡಿಜಿಟಲ್ ಸೌಲಭ್ಯ ಒದಗಿಸಲು ಜಾರಿಯಾದ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ.
ತಾಲ್ಲೂಕಿನಲ್ಲಿ ಮೂವತ್ತು ಗ್ರಾಮ ಪಂಚಾಯಿತಿಗಳಿದ್ದು, ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಒಂದೊಂದು ಗ್ರಂಥಾಲಯ ಸ್ಥಾಪಿಸಿ ಅಗತ್ಯವಿರುವ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು. ಆದರೆ, 2019ರಲ್ಲಿ ರಾಜ್ಯ ಸರ್ಕಾರ ಮೂವತ್ತು ಗ್ರಾಮ ಪಂಚಾಯಿತಿಗಳನ್ನು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಸೇರಿಸಿ ಎಲ್ಲಾ ಗ್ರಂಥಾಲಯಗಳ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕೈಗೆ ವಹಿಸಲಾಯಿತು. ಜೊತೆಗೆ ಗ್ರಂಥಾಲಯಗಳಿಗೆ ಅರಿವು ಕೇಂದ್ರಗಳು ಎಂದು ಹೆಸರನ್ನೂ ಇಡಲಾಯಿತು.
ಪಂಚಾಯತ್ ರಾಜ್ ಇಲಾಖೆ ತಾಲ್ಲೂಕಿನ ಎಲ್ಲಾ ಗ್ರಂಥಾಲಯಗಳನ್ನು ಮೂರು ವರ್ಷಗಳ ಹಿಂದೆ ಡಿಜಿಟಲೀಕರಣಗೊಳಿಸಿ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ. ಎಲ್ಲಾ ಗ್ರಂಥಾಲಯಗಳಿಗೆ ಸುಣ್ಣ ಬಣ್ಣ ಬಳಿದು ಎರಡರಿಂದ ಮೂರು ಕಂಪ್ಯೂಟರ್ ಅಳವಡಿಸಲಾಗಿದೆ. ಆದರೆ, ಇತ್ತೀಚೆಗೆ ತಾಲ್ಲೂಕಿನ ತಿಮ್ಮರಾವುತ್ತನಹಳ್ಳಿ ಗ್ರಂಥಾಲಯಕ್ಕೆ ಮಾತ್ರ ಇಂಟರ್ನೆಟ್ ಸೌಲಭ್ಯ ಒದಗಿಸಲಾಗಿದೆ. ಉಳಿದ 29 ಗ್ರಂಥಾಲಯಗಳಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.
ಡಿಜಿಟಲೀಕರಣಗೊಳಿಸಿದ ಮೇಲೆ ಗ್ರಂಥಾಲಯಗಳಲ್ಲಿ ಕಡ್ಡಾಯವಾಗಿ ಪುಸ್ತಕ, ನಿಯತಕಾಲಿಕೆ, ಓದಿಗೆ ಸಂಬಂಧಿಸಿದ ವಿಡಿಯೊ, ಆಡಿಯೊ, ಇ-ಪುಸ್ತಕ ಮತ್ತಿತರರ ಕಡತ ಮಾದರಿಯ ವಿಷಯವನ್ನು ಓದುಗರಿಗೆ ಅಂತರ್ಜಾಲದ ಮೂಲಕ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಉದ್ದೇಶ. ಆದರೆ, ಮೇಲ್ನೋಟಕ್ಕೆ ಕಂಪ್ಯೂಟರ್ ಅಳವಡಿಕೆ ಹೊರತುಪಡಿಸಿ ಯಾವುದೇ ರೀತಿಯ ಸೌಲಭ್ಯ ಓದುಗರಿಗೆ ಸಿಗುತ್ತಿಲ್ಲ. ಹಾಗಾಗಿ ಇದು ಯಾವ ರೀತಿಯ ಡಿಜಿಟಲ್ ವ್ಯವಸ್ಥೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಡಿಜಿಟಲ್ ಗ್ರಂಥಾಲಯದಲ್ಲಿ ಸುಸಜ್ಜಿತ ಟೇಬಲ್, ಖುರ್ಚಿ, ಪುಸ್ತಕ ಜೋಡಿಸುವ ಕಪಾಟು, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮತ್ತಿತರ ಸೌಲಭ್ಯ ಒದಗಿಸುವುದು ಕಡ್ಡಾಯ. ಆದರೆ, ಬಹುತೇಕ ಗ್ರಂಥಾಲಯಗಳಲ್ಲಿ ಸೌಲಭ್ಯಗಳೇ ಇಲ್ಲ.
ಇನ್ನು ಲಕ್ಷಾಂತರ ವೆಚ್ಚದಲ್ಲಿ ಗ್ರಂಥಾಲಯಗಳಿಗೆ ಸುಣ್ಣ ಬಣ್ಣ ಬಳಿಯಲಾಗಿದೆ. ಆದರೆ, ಕೆಲವೆಡೆ ಸ್ವಂತ ಕಟ್ಟಡಗಳೇ ಅಲ್ಲ. ಕೆಲವು ಗ್ರಂಥಾಲಯ ಕಟ್ಟಡ ಬೀಳುವ ಸ್ಥಿತಿಯಲ್ಲಿವೆ. ಇನ್ನೂ ಕೆಲವು ಗ್ರಂಥಾಲಯಗಳಿಗೆ ಕಿಟಕಿ, ಬಾಗಿಲುಗಳು ಮುರಿದು ಬಿದ್ದಿವೆ. ಹೀಗಿರುವಾಗ ಕಂಪ್ಯೂಟರ್ ರಕ್ಷಿಸುವುದು ಹೇಗೆ? ಜೊತೆಗೆ ಓದುಗರನ್ನು ಆಕರ್ಷಿಸುವುದು ಹೇಗೆ ಎಂಬುದು ಗ್ರಂಥಪಾಲಕರ ಅಳಲಾಗಿದೆ.
ಪ್ರತಿನಿತ್ಯ ಓದುಗರಿಗೆ ಬೇಕಾಗುವ ನಿಯತಕಾಲಿಕೆ, ಪೆನ್ನು, ರಬ್ಬರ್, ಪೊರಕೆ ಮತ್ತಿತರ ವಸ್ತು ಖರೀದಿಗೆ ಪ್ರತಿ ಪಂಚಾಯಿತಿ ಅಧಿಕಾರಿಗಳು ಗ್ರಂಥಾಲಯಗಳಿಗೆ ತಿಂಗಳಿಗೆ ₹1 ಸಾವಿರ ಹಾಗೂ ಸ್ವಚ್ಛತೆಗೆ 200 ನೀಡಲು ಪಂಚಾಯತ್ ರಾಜ್ ಇಲಾಖೆ 2022 ಡಿ.12 ರಂದು ಸುತ್ತೋಲೆ ಹೊರಡಿಸಿತ್ತು. ಆದರೆ, ಆ ಆದೇಶ ಕೇವಲ ಪೇಪರಲ್ಲಿ ಮಾತ್ರ ಉಳಿದಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಬಹುತೇಕ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರೇ ನಿಯತಕಾಲಿಕೆಗಳನ್ನು ಸ್ವಂತ ಹಣದಿಂದ ಖರೀದಿಸಿ ಓದುಗರಿಗೆ ಒದಗಿಸುತ್ತಿದ್ದಾರೆ.
ಕೆಲವು ಗ್ರಂಥಾಲಯಗಳಲ್ಲಿ ಸುಸಜ್ಜಿತ ಗಾಳಿ, ಬೆಳಕು, ಕಂಪ್ಯೂಟರ್ ಹಾಗೂ ಫ್ಯಾನ್ ನಿರ್ವಹಣೆಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹಾಗಾಗಿ ಹಗಲಿನಲ್ಲೂ ಕತ್ತಲಿನಿಂದ ಕೂಡಿರುತ್ತವೆ. ಈ ಸಮಸ್ಯೆ ಬಗೆಹರಿಸುವಂತೆ ಪಿಡಿಒ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಎಂಬುದು ಓದಗರ ಪ್ರಶ್ನೆಯಾಗಿದೆ.
ತಾಲ್ಲೂಕಿನಲ್ಲಿರುವ ಎಲ್ಲಾ ಗ್ರಂಥಾಲಯಗಳು ಡಿಜಿಟಲ್ ವ್ಯವಸ್ಥೆಗೆ ಒಳಗಾಗಿದ್ದು ಎಲ್ಲಾ ಕಡೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದು ಕಡ್ಡಾಯ. ಹಾಗಾಗಿ ಎಲ್ಲಾ ಕಡೆಗಳಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.ಎನ್.ವಿ.ಬಾಬು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ.
ಹೆರಿಗಷ್ಟೇ ಡಿಜಿಟಲ್ ಗ್ರಂಥಾಲಯ. ಪಿಡಿಒ ಅಧಿಕಾರಿಗಳಿಗೆ ಸುಮಾರು ವರ್ಷಗಳಿಂದ ಪೇಪರ್ ಬಿಲ್ ಹಾಗೂ ಸ್ವಚ್ಛತೆಗಾಗಿ ಹಣ ಕೇಳುತ್ತಿದ್ದರೂ ಕೊಡುತ್ತಿಲ್ಲ. ಹಾಗಾಗಿ ಗ್ರಂಥಾಲಯ ನಿರ್ವಹಣೆ ಕಷ್ಟವಾಗುತ್ತಿದೆ.ವೆಂಕಟರಾಮ್, ಗ್ರಂಥಪಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.