ADVERTISEMENT

ಅಂಗವೈಕಲ್ಯ ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 14:59 IST
Last Updated 8 ಸೆಪ್ಟೆಂಬರ್ 2020, 14:59 IST
ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಕೋಲಾರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಕೋಲಾರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿದರು.   

ಕೋಲಾರ: ‘ಅಂಗವೈಕಲ್ಯ ಶಾಪವಲ್ಲ. ಅಂಗವಿಕಲರ ಬಗ್ಗೆ ಕೀಳರಿಮೆ ಬೇಡ. ಅಂಗವಿಕಲತೆ ಮರೆತು ಸಮಾಜದ ಆಸ್ತಿಯಾಗಿ ಸಾಮಾನ್ಯ ಪ್ರಜೆಗಳಂತೆ ಬದುಕಿನ ದಾರಿ ಕಂಡುಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ದ್ವಿಚಕ್ರ ವಾಹನ, ಸಾಧನಾ ಸಲಕರಣೆ ವಿತರಿಸಿ ಮಾತನಾಡಿದರು.

‘ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಯೋಜನೆಗಳಡಿ ಸೌಲಭ್ಯ ನೀಡುತ್ತಿದೆ. ಇದರಿಂದ ಅಂಗವಿಕಲರು ಸ್ವಾವಲಂಬಿ ಜೀವನ ಸಾಗಿಸಲು ಸಾಧ್ಯವಾಗಿದೆ. ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ. ಅಂಗವಿಕಲರು ಧೃತಿಗೆಡದೆ ಛಲದಿಂದ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅಂಗವಿಕಲರಿಗೆ ಸಮಾಜದ ಅನುಕಂಪ ಬೇಕಿಲ್ಲ. ಅವರ ಕೌಶಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು. ಅಂಗವೈಕಲ್ಯವು ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ. ಅಂಗವಿಕಲರು ಬುದ್ಧಿಶಕ್ತಿಯಲ್ಲಿ ಮೇಧಾವಿಗಳಾಗಿರುತ್ತಾರೆ. ಅಂಗವಿಕಲರಲ್ಲೂ ಸಾಧನೆಯ ಛಲವಿದೆ ಎಂಬುದನ್ನು ಹಲವರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ’ ಎಂದರು.

‘ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗೆ ಅನುದಾನ ಮೀಸಲಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಅಂಗವಿಕಲರಿಗೆ ದೊರಕುವ ಎಲ್ಲಾ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಬೇಕು. ಅಧಿಕಾರಿಗಳು ಅಂಗವಿಕಲರನ್ನು ಕಡೆಗಣಿಸದೆ ಅವರ ಕೆಲಸ ಮಾಡಿಕೊಡಬೇಕು. ಅರ್ಹರಿಗೆ ಸೌಕರ್ಯ ಕಲ್ಪಿಸಲು ಅಸಡ್ಡೆ ತೋರಬಾರದು’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಸೂಚಿಸಿದರು.

ಮುಖ್ಯವಾಹಿನಿಗೆ ಬನ್ನಿ: ‘ಅಂಗವೈಕಲ್ಯ ಸಮಸ್ಯೆ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಲವು ಕಾರ್ಯಕ್ರಮ ರೂಪಿಸಿರುವುದರಿಂದ ದೇಶದಲ್ಲಿ ಅಂಗವಿಕಲರ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರದ ಸವಲತ್ತುಗಳನ್ನು ಅಂಗವಿಕಲರಿಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ. ಅಂಗವಿಕಲರು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಆಶಿಸಿದರು.

‘ಅಂಗವಿಕಲರನ್ನು ನಿರ್ಲಕ್ಷಿಸದೆ ಪ್ರೀತಿ, ವಾತ್ಸಲ್ಯನಿಂದ ಕಾಣಬೇಕು. ಜಿಲ್ಲೆಯಲ್ಲಿ ಅಂಗವಿಕಲರಿಗೆ ವಾಹನದ ಕೊರತೆ ಇರಬಾರದು. ಅಂಗವಿಕಲರಲ್ಲೂ ಸಾಧನೆಯ ಛಲವಿದೆ ಎಂಬುದನ್ನು ಹಲವರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅಂಗವಿಕಲರು ಯಾವುದೇ ಕಾರಣಕ್ಕೂ ಕುಗ್ಗಬಾರದು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ ಪಾಲಿ, ತಹಶೀಲ್ದಾರ್‌ ಶೋಭಿತಾ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.