ADVERTISEMENT

ಬಹಿರಂಗ ಚರ್ಚೆ: ಶಾಸಕರಿಗೆ ಪಂಥಾಹ್ವಾನ

ದಾಖಲೆ ಬಹಿರಂಗ: ಮಾಜಿ ಶಾಸಕರ ಸವಾಲು

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:23 IST
Last Updated 5 ಮೇ 2022, 2:23 IST
ಮಾಲೂರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಬಸವ ಜಯಂತಿ ಅಂಗವಾಗಿ ಬಿಜೆಪಿ ಮುಖಂಡ ಹೂಡಿ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ಅವರು ಬಸವಣ್ಣನ ಭಾವಚಿತ್ರ ವಿತರಿಸಿದರು
ಮಾಲೂರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಬಸವ ಜಯಂತಿ ಅಂಗವಾಗಿ ಬಿಜೆಪಿ ಮುಖಂಡ ಹೂಡಿ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ಅವರು ಬಸವಣ್ಣನ ಭಾವಚಿತ್ರ ವಿತರಿಸಿದರು   

ಮಾಲೂರು: ‘ತಾಲ್ಲೂಕು ಆಡಳಿತದ ಕಾರ್ಯವೈಖರಿ ಮತ್ತು ಟೇಕಲ್ ಹೋಬಳಿಯಲ್ಲಿ ನಡೆಯುತ್ತಿರುವ ಕಲ್ಲು ಕುಟುಕರ ವಿಚಾರ ಸಂಬಂಧ ಶಾಸಕರು ನೇರ ಚರ್ಚೆಗೆ ಬಂದರೆ ದಾಖಲೆ ಸಮೇತ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧ’ ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ‍ಪಂಥಾಹ್ವಾನ ನೀಡಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತ , ವೀರಶೈವ ಲಿಂಗಾಯತ ಸಮಾಜದಿಂದ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋಚಿಮುಲ್‌ ಅಧ್ಯಕ್ಷ ಕೆ.ವೈ. ನಂಜೇಗೌಡ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಗೌರಿಬಿದನೂರಿನ ಕೋಚಿಮಲ್ ನಿರ್ದೇಶಕ ಮಂಜುನಾಥ್ ರೆಡ್ಡಿ ಅವ್ಯವಹಾರದ ಆರೋಪ ಮಾಡಿದ್ದಾರೆ. ಈ ಬಗ್ಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಶಾಸಕರು ಮೊದಲು ನಿಜ ಸಂಗತಿ ತಿಳಿಸಲಿ ಎಂದು ಲೇವಡಿ ಮಾಡಿದರು.

ADVERTISEMENT

ನೂರಾರು ವರ್ಷಗಳಿಂದ ಟೇಕಲ್‌ ಜನರು ಕಲ್ಲು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಈ ಕೆಲಸ ಬಿಟ್ಟರೆ ಬೇರೆ ಯಾವ ಕೆಲಸವೂ ಬರುವುದಿಲ್ಲ. ಅದನ್ನು ಬಿಟ್ಟರೆ ಅವರು ಊರು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಲಿದೆ. ಅಲ್ಲಿ ಕೆಲಸ ಮಾಡುವ ಕಲ್ಲು ಕುಟುಕರಿಗೆ ಲಾಟರಿ ಮೂಲಕ ಯಾವುದೇ ನ್ಯಾಯ ಸಿಗುವುದಿಲ್ಲ ಎಂದರು.

ಕಲ್ಲು ಕುಟುಕರು ಕೆಲಸ ಮಾಡುತ್ತಿರುವ ಜಾಗಗಳನ್ನು ಅವರಿಗೆ ನೀಡಬೇಕು. ಅದು ಬಿಟ್ಟು ನೆರೆಯವರ ಕೈಯಲ್ಲಿ 300 ಅರ್ಜಿ ಹಾಕಿಸಿ ಅವರ ಹೆಸರಿಗೆ ಮಂಜೂರು ಮಾಡಿಸಿಕೊಂಡು ಆ ನಂತರ ಅವರಿಂದ ಖರೀದಿ ಮಾಡಿದ್ದೇನೆಂದು ಹೇಳುವಂತೆ ಆಗ ಬಾರದು. ಆ ಭಾಗದಲ್ಲಿ ಒಂದೇ ಕುಟುಂಬಕ್ಕೆ ಎಷ್ಟು ಜಲ್ಲಿ ಕ್ರಷರ್‌ಗಳನ್ನು ಮಂಜೂರು ಮಾಡಿಕೊಡಲಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

ಮತದಾರರು ಅಭಿವೃದ್ಧಿ ಕೆಲಸ ಮಾಡಲು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಮೊದಲು ಒತ್ತು ನೀಡಬೇಕು ಎಂದು ಆಗ್ರಹಿಸಿದರು.‌

ಜಿಲ್ಲಾ ಪಂಚಾಯಿತಿಮಾಜಿ ಸದಸ್ಯ ಚಿನ್ನಸ್ವಾಮಿಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬೆಳ್ಳಾವಿ ಸೋಮಣ್ಣ, ಅಗ್ರಿ ನಾರಾಯಣಪ್ಪ, ಆಲೂಗಡ್ಡೆ ಮಂಜುನಾಥ್, ಸಯ್ಯದ್ ಅಸ್ಗರ್, ಮಂಜುನಾಥ್, ತೇಜಸ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.