ADVERTISEMENT

ದೀಪಾವಳಿ: 20 ಮಂದಿಗೆ ಸುಟ್ಟ ಗಾಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 13:58 IST
Last Updated 28 ಅಕ್ಟೋಬರ್ 2019, 13:58 IST

ಕೋಲಾರ: ದೀಪಾವಳಿ ಹಬ್ಬದ ಭಾನುವಾರ ಪಟಾಕಿ ಸಿಡಿಸುವಾಗ ತಾಲ್ಲೂಕಿನ ವಿವಿಧೆಡೆ 20ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿದ್ದು, ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಟಾಕಿಗಳಿಂದ ಮಕ್ಕಳು ಹಾಗೂ ಹಿರಿಯರ ಕಣ್ಣಿಗೆ ಪೆಟ್ಟಾಗಿದೆ. ಮತ್ತೆ ಕೆಲವರಿಗೆ ಸುಟ್ಟ ಗಾಯಗಳಾಗಿವೆ. ನಗರದ ವಿವೇಕ ನೇತ್ರಾಲಯ ಆಸ್ಪತ್ರೆಯೊಂದರಲ್ಲೇ 10 ಮಂದಿ ಕಣ್ಣಿನ ಚಿಕಿತ್ಸೆಗೆ ಒಳಗಾಗಿದ್ದಾರೆ. ವೆಂಕಟೇಶಶೆಟ್ಟಿ ಚಿಕಿತ್ಸಾಲಯದಲ್ಲಿ 12ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ.

‘ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದಿನದ 24 ತಾಸೂ ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಿದ್ದು, ಸಂಪೂರ್ಣ ದೃಷ್ಟಿ ಹಾನಿಯಾಗಿರುವ ಯಾವುದೇ ಪ್ರಕರಣ ವರದಿಯಾಗಿಲ್ಲ’ ಎಂದು ವಿವೇಕ ನೇತ್ರಾಲಯದ ವೈದ್ಯ ಡಾ.ಎಚ್.ಆರ್.ಮಂಜುನಾಥ್ ತಿಳಿಸಿದರು.

ADVERTISEMENT

‘ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವಾಗ ಮಕ್ಕಳು ಮಾತ್ರವಲ್ಲದೇ ಪೋಷಕರ ಕಣ್ಣಿಗೂ ಹಾನಿಯಾಗಿದೆ. ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗೆ ಬಂದಿರುವ ರೋಗಿಗಳಿಎ ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದರು. 

‘ಪಟಾಕಿ ಸಿಡಿಸುವುದನ್ನೇ ಬಿಟ್ಟರೆ ಒಳಿತು. ಪರಿಸರದ ಜತೆಗೆ ಕಣ್ಣಿನ ರಕ್ಷಣೆಗೂ ಸಹಕಾರಿ. ಪಟಾಕಿ ಸಿಡಿಸಲೇಬೇಕಾದಲ್ಲಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ನಗರದ ದೀಕ್ಷಿತ್ ಎಂಬ 8 ವರ್ಷದ ಬಾಲಕನಿಗೆ ಕಣ್ಣಿನ ರೆಪ್ಪೆ ಸುಟ್ಟಿದ್ದು, ಕಪ್ಪು ಗುಡ್ಡೆಗೆ ಸ್ವಲ್ಪ ಗಾಯವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ, ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ, ಇಟಿಸಿಎಂ ಆಸ್ಪತ್ರೆ, ವಾಸನ್ ಐ–ಕೇರ್, ನೇತ್ರದೀಪಾ, ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಹಲವು ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.