ADVERTISEMENT

ವ್ಯವಸ್ಥಿತವಾಗಿ ವ್ಯಾಪಾರ ಮಾಡಿ: ವ್ಯಾಪಾರಿಗಳಿಗೆ ನಗರಸಭೆ ಆಯುಕ್ತರ ಮನವಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 14:14 IST
Last Updated 16 ಜುಲೈ 2019, 14:14 IST
ಕೋಲಾರ ನಗರಸಭೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾಲ್ಗೊಂಡಿದ್ದರು.
ಕೋಲಾರ ನಗರಸಭೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾಲ್ಗೊಂಡಿದ್ದರು.   

ಕೋಲಾರ: ‘ಬೀದಿ ಬದಿ ವ್ಯಾಪಾರಿಗಳು ಕಾನೂನು ಅನ್ವಯ ವಹಿವಾಟು ನಡೆಸದಿದ್ದರೆ ದಂಡ ವಿಧಿಸಿ ಶಿಕ್ಷೆಗೆ ಗುರಿಪಡಿಸುತ್ತೇವೆ’ ಎಂದು ನಗರಸಭೆ ಆಯುಕ್ತ ಟಿ.ಆರ್.ಸತ್ಯನಾರಾಯಣ ಎಚ್ಚರಿಕೆ ನೀಡಿದರು.

ಇಲ್ಲಿ ಮಂಗಳವಾರ ನಡೆದ ಬೀದಿ ಬದಿ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿ, ‘ಮನಬಂದಂತೆ ಎಲ್ಲೆಂದರಲ್ಲಿ ವ್ಯಾಪಾರ ಮಾಡುವುದು, ಸ್ವಚ್ಛತೆ ಕಾಪಾಡದಿರುವುದು, ಪ್ಲಾಸ್ಟಿಕ್ ಕವರ್‌ ಬಳಸುವುದು ಕಾನೂನು ಪ್ರಕಾರ ತಪ್ಪು. ಇದನ್ನು ಅಂತ್ಯಗೊಳಿಸಿ ವ್ಯವಸ್ಥಿತ ರೀತಿಯಲ್ಲಿ ವ್ಯಾಪಾರ ಮಾಡಿ’ ಎಂದು ಸಲಹೆ ನೀಡಿದರು.

‘ವ್ಯಾಪಾರ ಮಾಡಬೇಡಿ ಎಂದು ನಾವು ನಿಮಗೆ ಹೇಳುತ್ತಿಲ್ಲ. ಅದಕ್ಕೂ ಕೆಲ ಕಾನೂನುಗಳಿವೆ. ಕಾನೂನು ವ್ಯಾಪ್ತಿಯಲ್ಲಿ ನೀವು ವಹಿವಾಟು ನಡೆಸಿದರೆ ಯಾವುದೇ ಸಮಸ್ಯೆಯಿಲ್ಲ. ನಿರುದ್ಯೋಗಿಗಳ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲ ಷರತ್ತು ವಿಧಿಸಿ ವ್ಯಾಪಾರಕ್ಕೆ ನಗರಸಭೆಯಿಂದ ಅನುಮತಿ ನೀಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ನಿಮಗೆ ಜಾಗ ಕೊಟ್ಟ ಮಾತ್ರಕ್ಕೆ ಮನಬಂದಂತೆ ಕಂಡಕಂಡಲ್ಲಿ ವ್ಯಾಪಾರ ಮಾಡುವುದಲ್ಲ. ಸಾರ್ವಜನಿಕರಿಂದ ನಗರಸಭೆಗೆ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸ್ವಚ್ಛತೆಗೆ ಕೈಜೋಡಿಸಿ: ‘ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳ ಬಳಕೆ ಬಹುತೇಕ ನಿಯಂತ್ರಣವಾಗಿದೆ. ಆದರೆ, ಬೀದಿ ಬದಿ ವ್ಯಾಪಾರಿಗಳು ಗ್ರಾಹಕರಿಗೆ ಹೆಚ್ಚಾಗಿ ಪ್ಲಾಸ್ಟಿಕ್‌ ಕವರ್‌ಗಳನ್ನು ಕೊಡುತ್ತಿರುವುದು ಗಮನಕ್ಕೆ ಬಂದಿದೆ. ಪ್ಲಾಸ್ಟಿಕ್ ಕವರ್‌ ಬಳಕೆ ಕೊಡುವುದನ್ನು ಬಿಟ್ಟರೆ ಸಾರ್ವಜನಿಕರೇ ಬ್ಯಾಗ್ ಹಿಡಿದು ಬರುತ್ತಾರೆ’ ಎಂದು ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಜೆ.ಶಿವಪ್ರಕಾಶ್ ಸಲಹೆ ನೀಡಿದರು.

‘ಬೀದಿ ಬದಿ ವ್ಯಾಪಾರಿಗಳು ವಹಿವಾಟಿನ ನಂತರ ದಿನದ ಕೊನೆಯಲ್ಲಿ ಕಸ ಸ್ವಚ್ಛಗೊಳಿಸಬೇಕು. ನಗರಸಭೆಯಲ್ಲಿ ಸ್ವಚ್ಛತಾ ಸಿಬ್ಬಂದಿಯ ಕೊರತೆಯಿದೆ. ಹೀಗಾಗಿ ಸ್ವಚ್ಛತಾ ಕಾರ್ಯಕ್ಕೆ ನಗರಸಭೆ ಜತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ನಿಮ್ಮಿಂದ ಪರಿಸರ ಮಾಲಿನ್ಯವಾದರೆ ಮುಲಾಜಿಲ್ಲದೆ ದಂಡ ವಿಧಿಸುತ್ತೇವೆ. ಅಲ್ಲದೇ, ವಾಣಿಜ್ಯ ಪರವಾನಗಿ ರದ್ದುಪಡಿಸುತ್ತೇವೆ. ಮುಂದಿನ ದಿನಗಳಲ್ಲಿ ವಹಿವಾಟಿಗೆ ಅನುಮತಿ ಪತ್ರ ನೀಡುವ ಜತೆಗೆ ಸೇವಾ ಶುಲ್ಕ ನಿಗದಿಪಡಿಸುತ್ತೇವೆ. ಪರಿಸರದ ಬಗ್ಗೆ ನಿಮಗೂ ಕಾಳಜಿ ಇರಬೇಕು’ ಎಂದರು.

ಕಾನೂನುಗಳ ಕುರಿತು ಬೀದಿ ಬದಿ ವ್ಯಾಪಾರಿಗಳಿಗೆ ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.