ADVERTISEMENT

ನೇಕಾರ ಸಮುದಾಯಕ್ಕೆ ಸೌಕರ್ಯ ಕಲ್ಪಿಸಿಲ್ಲ

ಮುಖ್ಯಮಂತ್ರಿ ವಿರುದ್ಧ ರಾಜ್ಯ ನೇಕಾರರ ಮಹಾಸಭಾ ಅಧ್ಯಕ್ಷ ಸೋಮಶೇಖರ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 12:05 IST
Last Updated 11 ಏಪ್ರಿಲ್ 2019, 12:05 IST

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕೈಮಗ್ಗ ದಿನ ಘೋಷಿಸಿ ನೇಕಾರ ಸಮುದಾಯಕ್ಕೆ ಹಲವು ಯೋಜನೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ನೇಕಾರರ ಮಹಾಸಭಾ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಹೇಳಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವುದೇ ಸರ್ಕಾರ ನೇಕಾರರನ್ನು ಗುರುತಿಸಿರಲಿಲ್ಲ. ಮೋದಿ ಪ್ರಧಾನಿಯಾದ ಬಳಿಕ 2015ರ ಆ.7ರಂದು ರಾಷ್ಟ್ರೀಯ ಕೈಮಗ್ಗ ದಿನ ಘೋಷಿಸುವ ಮೂಲಕ ನೇಕಾರರಿಗೂ ಮಾನ್ಯತೆ ದೊರಕಿಸಿ ಕೊಟ್ಟಿದ್ದಾರೆ’ ಎಂದರು.

‘ಕೇಂದ್ರದ ಮುದ್ರಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಜನಧನ್, ಸ್ವಯಂ ಉದ್ಯೋಗ ಯೋಜನೆಯಡಿ ನೇಕಾರ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ 27 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಹಾಗೂ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಮೋದಿ ಅವರು ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆಪಡುವಂತೆ ಮಾಡಿದ್ದಾರೆ. ಹೀಗಾಗಿ ಅವರು ಮತ್ತೊಮೆ ಪ್ರಧಾನಿಯಾಗಬೇಕು’ ಎಂದು ಆಶಿಸಿದರು.

ಸೌಕರ್ಯ ಕಲ್ಪಿಸಿಲ್ಲ: ‘2018ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೈತರು, ನೇಕಾರರ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಅವರಿಗೆ ಬಹುಮತ ಸಿಗಲಿಲ್ಲ. ನಂತರ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಅವರು ಜವಳಿ ಖಾತೆಯನ್ನು ತಮ್ಮ ಬಳಿಯಲ್ಲೇ ಇಟ್ಟುಕೊಂಡಿದ್ದು, 9 ತಿಂಗಳಿಂದ ಸಮುದಾಯಕ್ಕೆ ಯಾವುದೇ ಸೌಕರ್ಯ ಕಲ್ಪಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಲೋಕಸಭೆ ಚುನಾವಣೆ ನಂತರವಾದರೂ ಕುಮಾರಸ್ವಾಮಿ ಅವರು ಜವಳಿ ಖಾತೆ ಜವಾಬ್ದಾರಿಯನ್ನು ಬೇರೊಬ್ಬರಿಗೆ ವಹಿಸಿ ಸಮುದಾಯಕ್ಕೆ ಅನುಕೂಲವಾಗುವ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

55 ಲಕ್ಷ ಜನಸಂಖ್ಯೆ: ‘ರಾಜ್ಯದಲ್ಲಿ ನೇಕಾರ ಸಮುದಾಯ ಜನಸಂಖ್ಯೆ ಸುಮಾರು 55 ಲಕ್ಷವಿದೆ. ಜಿಲ್ಲೆಯಲ್ಲಿ 1 ಲಕ್ಷ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1.50 ಲಕ್ಷ ಜನಸಂಖ್ಯೆಯಿದೆ. ಸಮುದಾಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಬೆಂಬಲಿಸುತ್ತಿದ್ದೇವೆ’ ಎಂದು ನೇಕಾರ ಸಮುದಾಯದ ಮುಖಂಡ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ರಾಜ್ಯ ನೇಕಾರರ ಮಹಾಸಭಾ ಜಂಟಿ ಕಾರ್ಯದರ್ಶಿ ಪರಮೇಶ್, ನಿರ್ದೇಶಕ ಮಲ್ಲೇಶ್, ಸದಸ್ಯರಾದ ನಾಗಭೂಷಣ್, ಈಶ್ವರಪ್ಪ, ವಿಶ್ವನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.