ADVERTISEMENT

ರಕ್ತದಾನ ಮಾಡಿ ಜೀವ ಉಳಿಸಿ: ಸಿಇಒ ದರ್ಶನ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಮೇ 2020, 14:53 IST
Last Updated 23 ಮೇ 2020, 14:53 IST
ಎಸ್‍ಎಫ್‍ಐ ಮತ್ತು ಡಿವೈಎಫ್‌ಐ ಸಹಯೋಗದಲ್ಲಿ ಕೋಲಾರದಲ್ಲಿ ಶನಿವಾರ ರಕ್ತದಾನ ಶಿಬಿರ ನಡೆಸಲಾಯಿತು.
ಎಸ್‍ಎಫ್‍ಐ ಮತ್ತು ಡಿವೈಎಫ್‌ಐ ಸಹಯೋಗದಲ್ಲಿ ಕೋಲಾರದಲ್ಲಿ ಶನಿವಾರ ರಕ್ತದಾನ ಶಿಬಿರ ನಡೆಸಲಾಯಿತು.   

ಕೋಲಾರ: ‘ಯುವಕ ಯುವತಿಯರು ಸಾಮಾಜಿಕ ಕಾಳಜಿ ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಅಭಿಪ್ರಾಯಪಟ್ಟರು.

ಎಸ್‍ಎಫ್‍ಐ ಮತ್ತು ಡಿವೈಎಫ್‌ಐ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಎಸ್‍ಎಫ್‍ಐ ಮತ್ತು ಡಿವೈಎಫ್‍ಐ ವಿದ್ಯಾರ್ಥಿ ಸಂಘಟನೆಗಳು ಲಾಕ್‌ಡೌನ್‌ನ ಸಂಕಷ್ಟದ ಸಮಯದಲ್ಲಿ ರಕ್ತದಾನ ಶಿಬಿರ ನಡೆಸಿ ಸಮಾಜಕ್ಕೆ ಮಾದರಿಯಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಕ್ತನಿಧಿ ಕೇಂದ್ರಗಳು ಬಂದ್ ಆಗಿರುವುದರಿಂದ ರಕ್ತದ ಅಭಾವ ಸೃಷ್ಟಿಯಾಗಿದೆ. ಇದರಿಂದ ಗರ್ಭಿಣಿಯರು, ಅಪಘಾತದ ಗಾಯಾಳುಗಳ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ. ರಕ್ತದ ಕೊರತೆಯಿಂದ ಆಪತ್ತಿನಲ್ಲಿರುವ ಜೀವಕ್ಕೆ ಮತ್ತೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಲ್ಲ’ ಎಂದು ಹೇಳಿದರು.

ADVERTISEMENT

‘ಮನುಷ್ಯ ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆ ಬಿಡಬೇಕು. ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ರೀತಿ ಅಡ್ಡ ಪರಿಣಾಮ ಆಗುವುದಿಲ್ಲ. ಯುವಕ ಯುವತಿಯರು ರಕ್ತದಾನದ ಮಹತ್ವ ಅರಿಯಬೇಕು. ವರ್ಷಕ್ಕೆ 2 ಬಾರಿ ರಕ್ತದಾನ ಮಾಡಿ ಆರೋಗ್ಯವಂತರಾಗಿರಬೇಕು’ ಎಂದು ಸಲಹೆ ನೀಡಿದರು.

ರಾಜ್ಯದೆಲ್ಲೆಡೆ ಶಿಬಿರ: ‘ಜಗತ್ತು ಇಂದು ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ರಕ್ತದ ಕೊರತೆಯಿಂದ ಪ್ರತಿನಿತ್ಯ ಸಾವಿರಾರು ಗರ್ಭಿಣಿಯರು, ರೋಗಿಗಳು, ಅಪಘಾತದ ಗಾಯಾಳುಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ, ಇಂತಹವರ ಪ್ರಾಣ ಉಳಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ’ ಎಂದು ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ವಿವರಿಸಿದರು.

‘ಎಸ್‍ಎಫ್‍ಐ ವತಿಯಿಂದ ಭಗತ್‌ಸಿಂಗ್‌ ರಕ್ತನಿಧಿ ಕೇಂದ್ರ ಆರಂಭಿಸುವ ಉದ್ದೇಶವಿದೆ. ಮಾರ್ಚ್‌ 23ರಂದು ಭಗತ್‌ಸಿಂಗ್‌ ಹುತಾತ್ಮರಾದ ದಿನ ಹಾಗೂ ಸೆ.28 ಅವರ ಜನ್ಮ ದಿನ. ಈ ಎರಡೂ ದಿನಗಳಂದು ರಕ್ತದಾನ ಶಿಬಿರ ನಡೆಸುವ ಮೂಲಕ ರಕ್ತದ ಬೇಡಿಕೆ ಪೂರೈಸಲು ಶ್ರಮಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಎಸ್‍ಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಶಿವಪ್ಪ, ತಾಲ್ಲೂಕು ಘಟಕದ ಜಂಟಿ ಕಾರ್ಯದರ್ಶಿ ಸುಪ್ರೀಂ, ಡಿವೈಎಫ್‍ಐ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ನಿರೇಶ್‌ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.