ADVERTISEMENT

ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿ:ಡಿಡಿಪಿಐ ಕಚೇರಿ ಎದುರು ಕೋಳಿ ಕಟ್ಟಿ ಧರಣಿ

ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ರೈತ ಸಂಘ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಮೇ 2019, 15:30 IST
Last Updated 15 ಮೇ 2019, 15:30 IST
ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಬುಧವಾರ ಡಿಡಿಪಿಐ ಕಚೇರಿ ಎದುರು ಕೋಳಿಗಳನ್ನು ಕಟ್ಟಿ ಧರಣಿ ನಡೆಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಬುಧವಾರ ಡಿಡಿಪಿಐ ಕಚೇರಿ ಎದುರು ಕೋಳಿಗಳನ್ನು ಕಟ್ಟಿ ಧರಣಿ ನಡೆಸಿದರು.   

ಕೋಲಾರ: ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು.

ಕಚೇರಿ ಮುಂದೆ ಕೋಳಿಗಳನ್ನು ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ ಧರಣಿನಿರತರು, ‘ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ವಂತಿಗೆ ದಂಧೆಗೆ ಇಳಿದಿವೆ. ವಂತಿಗೆ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾಗಿರುವ ಅಧಿಕಾರಿಗಳು ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೋಳಿ ಮೇಯಿಸಲಿ’ ಎಂದು ಕಿಡಿಕಾರಿದರು.

‘ವಂತಿಗೆ ಹಾವಳಿಯಿಂದ ಬಡ ವಿದ್ಯಾರ್ಥಿಗಳು ಮತ್ತು ಪೋಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಂತಿಗೆ ದಂಧೆ ನಿಯಂತ್ರಿಸಬೇಕಾದ ಅಧಿಕಾರಿಗಳು ಹಣದಾಸೆಗೆ ಶಿಕ್ಷಣ ಸಂಸ್ಥೆಗಳ ರಕ್ಷಣೆಗೆ ನಿಂತಿದ್ದಾರೆ. ಅವರಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ಹಣ ಸಂಪಾದನೆಯೇ ಮುಖ್ಯವಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ADVERTISEMENT

‘ವಂತಿಗೆ ಪಡೆಯಬಾರದೆಂದು ಸರ್ಕಾರದ ಆದೇಶವಿದೆ. ಆದರೆ, ಶಿಕ್ಷಣ ಸಂಸ್ಥೆಗಳು ಈ ಆದೇಶ ಉಲ್ಲಂಘಿಸಿ ಪೋಷಕರನ್ನು ಶೋಷಿಸುತ್ತಿವೆ. ಜಿಲ್ಲೆಯ ಜನರಿಗೆ ಜೀವನ ಸಾಗಿಸುವುದೇ ಕಷ್ಟವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಶಿಕ್ಷಣ ಸಂಸ್ಥೆಗಳು ವಂತಿಗೆ ಸೋಗಿನಲ್ಲಿ ಪೋಷಕರ ರಕ್ತ ಹೀರುತ್ತಿವೆ’ ಎಂದು ಆರೋಪಿಸಿದರು.

ಸುಲಿಗೆ ಮಾಡುತ್ತಿವೆ: ‘ಶಿಕ್ಷಣ ಸಂಸ್ಥೆಗಳು ಪ್ರವೇಶ ಶುಲ್ಕ, ಪಠ್ಯಪುಸ್ತಕ, ಬಸ್‌ ಸೌಲಭ್ಯ, ಸಿಇಟಿ ತರಬೇತಿ, ಸಮವಸ್ತ್ರ, ಮನೆಪಾಠ ಶುಲ್ಕದ ನೆಪದಲ್ಲಿ ಪೋಷಕರನ್ನು ಹಣ ಸುಲಿಗೆ ಮಾಡುತ್ತಿವೆ. ಬಡ ವಿದ್ಯಾರ್ಥಿಗಳು ವಂತಿಗೆ ಪಾವತಿಸಲಾಗದೆ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳ ಜತೆ ಸೇರಿ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ವಂತಿಗೆ ಪಾವತಿಸಲು ಸಾಧ್ಯವಾಗದ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲಾ ಕಾಲೇಜುಗಳಿಗೆ ಸೇರಿಸುತ್ತಿದ್ದಾರೆ. ಆದರೆ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲಸೌಕರ್ಯ ಸಮಸ್ಯೆಯಿದೆ. ಉಪನ್ಯಾಸಕರು ಹಾಗೂ ಶಿಕ್ಷಕರ ಕೊರತೆಯಿಂದ ಪಠ್ಯ ಬೋಧನೆ ಸರಿಯಾಗಿ ನಡೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನುಮತಿ ನೀಡಬಾರದು: ‘ಹೊಸ ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡಬಾರದು. ಎಲ್ಲಾ ಖಾಸಗಿ ಶಾಲೆಗಳಿಗೂ ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ) ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ವಿವರ ಪಟ್ಟಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಜಿಲ್ಲಾಧಿಕಾರಿಯು ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ವಂತಿಗೆ ಹಾವಳಿ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್‌, ಮುಳಬಾಗಿಲು ತಾಲ್ಲೂಕು ಘಟಕದ ಅಧ್ಯಕ್ಷ ಫಾರೂಕ್‌ ಪಾಷಾ, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್, ಹಸಿರು ಸೇನೆ ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ಆಂಜಿನಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.