ADVERTISEMENT

ಐತಿಹಾಸಿಕ ಸ್ಮಾರಕಗಳಿಗೆ ಹಾನಿ ಮಾಡಬೇಡಿ

ನಂಬಿಹಳ್ಳಿಯಲ್ಲಿ ‘ಗ್ರಾಮ ಸುತ್ತು’ ಕಾರ್ಯಕ್ರಮ: ನರಸಿಂಹನ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 16:38 IST
Last Updated 11 ಜೂನ್ 2020, 16:38 IST
ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ‘ಗ್ರಾಮ ಸುತ್ತು’ ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧಕ ಪ್ರೊ.ಕೆ.ಆರ್‌.ನರಸಿಂಹನ್‌ ಮಾತನಾಡಿದರು
ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ‘ಗ್ರಾಮ ಸುತ್ತು’ ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧಕ ಪ್ರೊ.ಕೆ.ಆರ್‌.ನರಸಿಂಹನ್‌ ಮಾತನಾಡಿದರು   

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಜನರು ತಮ್ಮ ಗ್ರಾಮಗಳಲ್ಲಿನ ಐತಿಹಾಸಿಕ ಸ್ಮಾರಕಗಳಿಗೆ ಯಾವುದೇ ಹಾನಿ ಉಂಟಾಗದಂತೆ ಎಚ್ಚರ ವಹಿಸಬೇಕು. ಯುವ ಸಮುದಾಯದಲ್ಲಿ ಸ್ಥಳೀಯ ಇತಿಹಾಸದ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು ಇತಿಹಾಸ ಸಂಶೋಧಕ ಪ್ರೊ.ಕೆ.ಆರ್‌.ನರಸಿಂಹನ್‌ ಹೇಳಿದರು.

ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ‘ಗ್ರಾಮ ಸುತ್ತು’ ಕಾರ್ಯಕ್ರಮದಲ್ಲಿ ಮಾತನಾಡಿ, ನಂಬಿಹಳ್ಳಿ ಪಂಚಲಿಂಗ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ. ಆದರೆ, ಇಲ್ಲಿನ ಐತಿಹಾಸಿಕ ಮಹತ್ವ ಹೊಂದಿರುವ ಶಿಲಾ ಶಾಸನಗಳು, ವೀರಗಲ್ಲುಗಳು ಹಾಗೂ ಸಂಗ್ರಾಮ ಶಿಲೆಗಳು ಜನರ ನಿರ್ಲಕ್ಷ್ಯದ ಪರಿಣಾಮವಾಗಿ ಹಾಳಾಗುತ್ತಿವೆ ಎಂದು ಹೇಳಿದರು.

ರಾಜ್ಯದಲ್ಲಿಯೇ ಅತಿ ದೊಡ್ಡದು ಹಾಗೂ ಮಹತ್ವದ್ದು ಎಂದು ಹೇಳಲಾದ ಸಂಗ್ರಾಮ ಶಿಲೆ ಈ ಗ್ರಾಮದ ಹೆಮ್ಮೆಯ ಸಂಗತಿಗಳಲ್ಲಿ ಒಂದಾಗಿದೆ. ಆದರೆ, ಅದಕ್ಕೆ ಬಣ್ಣ ಬಳೆದು ಅಂದಗೆಡಿಸಲಾಗಿದೆ. ಮಹತ್ವದ ಶಿಲಾ ಶಾಸನವೊಂದನ್ನು ಕಿತ್ತೆಸೆಯಲಾಗಿದೆ. ಶಿಲಾ ಶಾಸನಗಳನ್ನು ಜಗಲಿ ನಿರ್ಮಿಸಲು ಬಳಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಚೋಳರ ಆಳ್ವಿಕೆ ಕಾಲದಲ್ಲಿ ಮಹತ್ವ ಪಡೆದುಕೊಂಡಿದ್ದ ಈ ಗ್ರಾಮದಲ್ಲಿ ಇನ್ನೂ ಓದದಿರುವ ಶಿಲಾ ಶಾಸನಗಳಿವೆ. ಸುತ್ತ ಮುತ್ತ ವೀರಗಲ್ಲುಗಳು ಹಾಗೂ ಮಾಸ್ತಿ ಕಲ್ಲುಗಳಿವೆ. ಮಹಾಸತಿ ಕಲ್ಲುಗಳಿಗೂ ಕೊರತೆ ಇಲ್ಲ. ಗ್ರಾಮ ವಾಸಿಗಳು ಈ ಐತಿಹಾಸಿಕ ಕಣಜವನ್ನು ಕಾಯಬೇಕು ಎಂದು ಹೇಳಿದರು.

‘ಗ್ರಾಮ ಸುತ್ತು’ ಯೋಜನೆಯ ನಿರ್ದೇಶಕ ಅರಿವು ಶಿವಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಐತಿಹಾಸಿಕ ಸೊಗಡನ್ನು ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಪ್ರತಿ ತಾಲ್ಲೂಕಿನ
ಐತಿಹಾಸಿಕ ಮಹತ್ವ ಹೊಂದಿದ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಮಹತ್ವದ ಸಂಗತಿಗಳನ್ನು ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಹೋಬಳಿವಾರು ಸಂಚರಿಸಿ ಅಲ್ಲಿನ ಜನಪದ ಕಲೆ ಹಾಗೂ ಸಂಸ್ಕೃತಿಯ ಅಧ್ಯಯನ ನಡೆಸಲಾಗುತ್ತಿದೆ. ಎಲೆ ಮರೆಯ ಕಾಯಿಯಂತೆ ಇರುವ ಪ್ರತಿಭಾನ್ವಿತ ಜನಪದ ಕಲಾವಿದರ ಪರಿಚಯ ಮಾಡಿಕೊಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಸಾರ್ವಜನಿಕರು ಹಾಗೂ ಸಮಾನ ಮನಸ್ಕರು ಸ್ವಯಂ ಪ್ರೇರಣೆಯಿಂದ ಪ್ರೊತ್ಸಾಹಿಸುತ್ತಿದ್ದಾರೆ ಎಂದು ಹೇಳಿದರು.

ಡಾ.ಆರ್‌.ರವಿಕುಮಾರ್‌, ಪ್ರೊ.ಸರ್ವೇಶ್‌, ನಿವೃತ್ತ ಶಿಕ್ಷಕರಾದ ಎನ್‌.ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.