ವೇಮಗಲ್ ಪಟ್ಟಣದ ಮುಳಬಾಗಿಲು ದೋಸೆ ಕಾರ್ನರ್ ಈ ಭಾಗದ ದೋಸೆ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿದೆ.
ವೇಮಗಲ್ ಪಟ್ಟಣದ ಮುಳಬಾಗಿಲು ದೋಸೆ ಕಾರ್ನರ್ ಈ ಭಾಗದ ದೋಸೆ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿದೆ.
ನರಸಾಪುರ ರಸ್ತೆಯಲ್ಲಿರುವ ಮುಳಬಾಗಿಲು ದೋಸೆ ಕಾರ್ನರ್, ರಸ್ತೆ ಬದಿಯ ಚಿಕ್ಕ ಅಂಗಡಿ. ಇಲ್ಲಿನ ದೋಸೆ ಘಮುಲು ಈ ರಸ್ತೆ ತುಂಬಾ ಹರಡಿರುತ್ತದೆ.
ಇಲ್ಲಿನ ಮುಳಬಾಗಿಲು ದೋಸೆ ಬೇರೆ ದೋಸೆಯಂತೆ ದೊಡ್ಡದಾಗಿರುವುದಿಲ್ಲ. ಪುಟ್ಟ ಕಾವಲಿ ಮೇಲೆ ದೋಸೆ ಹೊಯ್ಯಲಾಗುತ್ತದೆ. ಸುತ್ತಲಿನ ಅಂಚು ಬಹಳ ತೆಳುವಾಗಿದ್ದರೆ ಮಧ್ಯ ಭಾಗ ಬಹಳ ಮಂದವಾಗಿರುತ್ತದೆ. ಅದರ ಜತೆಗೆ ಅದರ ಮೇಲೆ ಸವರುವ ಕೆಂಪು ಮಸಾಲೆ ಹಾಗೂ ಬೆಣ್ಣೆ ತುಪ್ಪದ ಘಮ ಒಂದಲ್ಲ, ಎರಡಲ್ಲ ಮೂರು ನಾಲ್ಕು ದೋಸೆ ತಿನ್ನುವಂತೆ ಪ್ರೇರೇಪಿಸುತ್ತದೆ. ಇದು ನೋಡಲು ತಟ್ಟೆ ಆಕಾರದಲ್ಲಿ ಕಾಣಿಸುತ್ತದೆ.
ಕಳೆದ ಆರು ತಿಂಗಳಿನ ಹಿಂದೆ ಮುಳಬಾಗಿಲು ದೋಸೆ ಕಾರ್ನರ್ ಆರಂಭಿಸಿರುವ ಮಾಲೀಕ ಉಮೇಶ್ ಹೇಳುವಂತೆ; ಗುಣಮಟ್ಟ ಹಾಗೂ ರುಚಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರಿಂದ ಇಲ್ಲಿನ ದೋಸೆಗೆ ಪಟ್ಟಣದ ಜನರು ಮನಸೋತಿದ್ದಾರೆ ಎನ್ನುತ್ತಾರೆ ಅವರು.
ಮುಳಬಾಗಿಲು ದೋಸೆ ಜತೆಗೆ ಸೆಟ್ ದೋಸೆ, ರವೆ ದೋಸೆ, ಪನ್ನೀರ್ ದೋಸೆ, ಮೊಟ್ಟೆ ದೋಸೆ ಹೀಗೆ ಸುಮಾರು 8-10 ನಾನಾ ವೆರೈಟಿ ದೋಸೆ ಇಲ್ಲಿ ತಯಾರು ಮಾಡಲಾಗುತ್ತದೆ.
ಎಲ್ಲಕ್ಕಿಂತ ಇಲ್ಲಿನ ಮುಳಬಾಗಿಲು ದೋಸೆಗೆ ತನ್ನದೇ ಆದ ಅಭಿಮಾನ ಬಳಗದವಿದೆ. ಈ ದೋಸೆ ಮೇಲೆ ಹಾಕಿರುವ ತುಪ್ಪದ ಸ್ವಾದಿಷ್ಟ ರುಚಿಗೆ ಮನಸೋಲದವರಿಲ್ಲ ಎನ್ನುತ್ತಾರೆ ಅವರು.
ಮಧ್ಯಾಹ್ನ ನಂತರ ಬಗೆ ಬಗೆ ದೋಸೆ, ಗಟ್ಟಿ ಚಟ್ನಿಗಾಗಿ ಜನ ಗುಂಪು ಸೇರುತ್ತಾರೆ. ಪಟ್ಟಣ ಸೇರಿದಂತೆ ಹೊರಗಡೆಯಿಂದ ಬಂದವರು ಈ ಹೋಟಲ್ ಹುಡುಕಿಕೊಂಡು ಬರುತ್ತಾರೆ. ಹೋಟೆಲ್ ರಸ್ತೆ ಬದಿಯಲ್ಲಿ ಚಿಕ್ಕದಾಗಿದ್ದರೂ ಪರಿಶುದ್ಧತೆ ಹಾಗೂ ಗುಣಮಟ್ಟದಿಂದ ಖ್ಯಾತಿ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.