ADVERTISEMENT

ಶ್ರೀನಿವಾಸಪುರ | ಆಸ್ಪತ್ರೆ ಆರೋಗ್ಯ ಕೆಡಿಸುವ ಚರಂಡಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 7:42 IST
Last Updated 28 ಆಗಸ್ಟ್ 2023, 7:42 IST
ಶ್ರೀನಿವಾಸಪುರದ ಸಕರ್ಾರಿ ಆಸ್ಪತ್ರೆ ಹಿಂಭಾಗದಲ್ಲಿ ಕೊಳೆತು ನಾರುತ್ತಿರುವ ಚರಂಡಿ. 3
ಶ್ರೀನಿವಾಸಪುರದ ಸಕರ್ಾರಿ ಆಸ್ಪತ್ರೆ ಹಿಂಭಾಗದಲ್ಲಿ ಕೊಳೆತು ನಾರುತ್ತಿರುವ ಚರಂಡಿ. 3   

ಆರ್.ಚೌಡರೆಡ್ಡಿ

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದ ರಸ್ತೆ ಬದಿಯ ಚರಂಡಿಗಳು ಕೊಳೆತು ನಾರುತ್ತಿವೆ. ಅಲ್ಲಿನ ಪರಿಸರ ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ.

ಅಲ್ಲಿನ ಪರಿಸ್ಥಿತಿ ಗಮನಿಸಿದರೆ, ಪುರಸಭೆ ಕೈಗೊಂಡಿರುವ ಸ್ವಚ್ಛತಾ ಕಾರ್ಯದ ಬಗ್ಗೆ ಅನುಮಾನ ಬರುತ್ತದೆ. ರಾಜ್ಯದಲ್ಲಿಯೇ ಸ್ವಚ್ಛತೆಗೆ ಹೆಸರಾದ ಇಲ್ಲಿನ ಸರ್ಕಾರಿ ಆಸ್ಪತ್ರೆ ಹಿಂಭಾಗ ಅನಾರೋಗ್ಯಕರ ಪರಿಸರ ಹೊಂದಿರುವುದು ಯಾರಿಗೆ ಆದರೂ ಬೇಸರ ತರಿಸುತ್ತದೆ. ನೀರು ಹರಿದು ಹೋಗಲು ಸಾಧ್ಯವಾಗದೆ ನಿಂತಿರುವ ನೀರಿನಲ್ಲಿ ತೇಲುತ್ತಿರುವ ಪ್ಲಾಸ್ಟಿಕ್ ಬಾಟಲ್‌ಗಳು, ಹಲವು ಬಗೆಯ ಕೊಳೆಯುವ ಪದಾರ್ಥಗಳಿಂದಾಗಿ ಅಸಹ್ಯಕರ ಪರಿಸರ ನಿರ್ಮಾಣವಾಗಿದೆ.

ADVERTISEMENT

‘ಸಂಜೆಯಾದರೆ ಸಾಕು, ಕೊಳೆತ ಚರಂಡಿಗಳಿಂದ ಬರುವ ಸೊಳ್ಳೆ ಕಾಟ ಹೆಚ್ಚುತ್ತದೆ. ಆಸ್ಪತ್ರೆ ಹೊರಗೆ ಮತ್ತು ಒಳಗೆ ಸೊಳ್ಳೆ ಕಡಿತ ಸಾಮಾನ್ಯ. ಇಷ್ಟಾದರೂ ಪುರಸಭೆ ಚರಂಡಿ ಸ್ವಚ್ಛತೆಗೆ ಗಮನ ನೀಡುತ್ತಿಲ್ಲ’ ಎಂಬುದು ಆಸ್ಪತ್ರೆಗೆ ಬರುವ ರೋಗಿಗಳ ಅಳಲು.

ಮುಖ್ಯ ಚರಂಡಿ ತುಂಬ, ಮೋರಿಗೆ ಅಡ್ಡಲಾಗಿ ಗಿಡಗಂಟಿಗಳು ಎತ್ತರವಾಗಿ ಬೆಳೆದಿವೆ. ಮಳೆಯಾದರೆ ನೀರು ಮೋರಿಯಲ್ಲಿ ಹರಿಯುವುದಿಲ್ಲ. ಚರಂಡಿ ತುಂಬಿದ ಬಳಿಕ ರಸ್ತೆಯ ಮೇಲೆ ಹರಿಯುತ್ತದೆ. ಅಂಥ ಸಂದರ್ಭದಲ್ಲಿ ಅಲ್ಲಿನ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ.

ಕಟ್ಟೆಕೆಳಗಿನ ಪಾಳ್ಯದಲ್ಲಿ ಹಾದುಹೋಗುವ ರಸ್ತೆ ಪಕ್ಕದಲ್ಲಿ ತಿಪ್ಪೆ ಹಾಗೂ ಕಸದ ರಾಶಿ ಹಾಕಲಾಗಿದೆ. ಕಟ್ಟೆ ಮೇಲೆ ಹೋಗುವ ರಸ್ತೆ ಬದಿಗಳು ಕಸ ಸುರಿಯುವ ಮೈದಾನವಾಗಿ ಪರಿಣಮಿಸಿವೆ. ಆದರೆ ನಾಗರಿಕರು ಸಹಿಸಿಕೊಂಡು ಜೀವಿಸುತ್ತಿದ್ದಾರೆ. ಒಡೆದ ಒಳಚರಂಡಿ ಪೈಪ್‌ಗಳಿಂದ ಬರುವ ಕೆಟ್ಟವಾಸನೆ ನಾಗರಿಕರಿಗೆ ಶಾಪವಾಗಿ ಪರಿಣಮಿಸಿದೆ. ಇಷ್ಟಾದರೂ ಪುರಸಭೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ ನಿವಾಸಿಗಳು.

ಅಮಾನಿಕೆರೆ ಕಟ್ಟೆ ಅಭಿವೃದ್ಧಿ ನೆನೆಗುದಿಗೆ ಬಿದ್ದಮೇಲೆ, ಸಂಚಾರಕ್ಕೆ ಯೋಗ್ಯವಿಲ್ಲದಾಯಿತು. ಕಟ್ಟೆಯ ಮೇಲಿನ ಹಳ್ಳಗಳು ಹಾಗೂ ಇಕ್ಕೆಲಗಳಲ್ಲಿನ ಅನಾರೋಗ್ಯಕರ ಪರಿಸರ ನಾಗರಿಕರ ಅನಾರೋಗ್ಯಕ್ಕೆ ಕಾರಣವಾಯಿತು. ಆದರೂ ಆ ಪ್ರದೇಶದಲ್ಲಿನ ಬಡವರಿಗೆ ಸಹಿಸಿಕೊಂಡು ಬದುಕುವುದು ಅನಿವಾರ್ಯವಾಗಿ ಪರಿಣಮಿಸಿದೆ. ಅಲ್ಲಿನ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬ ನಿವಾಸಿಗಳ ಕೂಗು, ಕೂಗಾಗಿಯೇ ಉಳಿದಿದೆ.

ಮಾಲಿನ್ಯ ತಡೆಗೆ ಯೋಜನೆ

ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಅಮಾನಿಕೆರೆ ಕಟ್ಟೆ ಅಭಿವೃದ್ಧಿಪಡಿಸಿ, ನಾಗರಿಕರು ವಾಯುವಿಹಾರ ನಡೆಸಲು ಅನುಕೂಲ ಮಾಡಿಕೊಡಲಾಗುವುದು. ತಾಲ್ಲೂಕಿನ ಗಡಿದಾಟಿ ನೆರೆಯ ಆಂಧ್ರಪ್ರದೇಶಕ್ಕೆ ಹರಿದುಹೋಗುವ ಮಳೆ ನೀರನ್ನು ಅಮಾನಿಕೆರೆಗೆ ಹರಿಸಿ, ಬೋಟಿಂಗ್ ಮತ್ತಿತರ ಜಲಕ್ರೀಡೆ ಕೈಗೊಳ್ಳಲು ಪೂರಕವಾದ ಕ್ರಮ ಕೈಗೊಳ್ಳಲಾಗುವುದು. ಕೆರೆ ಪ್ರದೇಶದಲ್ಲಿ ಪರಿಸರ ಮಾಲಿನ್ಯ ತಡೆಯಲು ಯೋಜನೆ ರೂಪಿಸಿ ಜಾರಿಗೆ ತರಲಾಗುವುದು – ಜಿ.ಕೆ.ವೆಂಕಟಶಿವಾರೆಡ್ಡಿ, ಶಾಸಕ

ಮೋರಿಗೆ ಅಡ್ಡಲಾಗಿ ಬೆಳೆದು ನಿಂತಿರುವ ಗಿಡಗಂಟಿ.
ರಸ್ತೆ ಬದಿಯಲ್ಲಿ ಹಾಕಲಾಗಿರುವ ತಿಪ್ಪೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.