ಕೋಲಾರ: ‘ಪ್ರಜಾವಾಣಿ’ಯಲ್ಲಿ ಸೋಮವಾರ ಪ್ರಕಟವಾಗಿದ್ದ ‘ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಘಾಟು’ ಎಂಬ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ‘ನಾರ್ಕೊ ಸಮನ್ವಯ ಸಮಿತಿ’ ಸಭೆ ನಡೆದಿದ್ದು, ಮಾದಕ ವಸ್ತುಗಳ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲಾ ಕೈಗಾರಿಕೆ ಹಾಗೂ ಕಂಪನಿಗಳ ಮುಖ್ಯಸ್ಥರ ಸಭೆ ನಡೆಸಿ ಅವರವರ ಕಾರ್ಖಾನೆ ಹಾಗೂ ಕಂಪನಿಗಳಲ್ಲಿ ಮಾದಕ ವಸ್ತುಗಳ ನಿಯಂತ್ರಣ ಸಮಿತಿ ರಚನೆ ಮಾಡಲು ಸೂಚಿಸಲಾಗುವುದು ಎಂದು ಎಂ.ಆರ್.ರವಿ ಹೇಳಿದರು.
‘ಈಚೆಗೆ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚು ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ಇಡಬೇಕಾದ ಅವಶ್ಯವಿದೆ’ ಎಂದರು.
‘ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಣೆ, ಮಾರಾಟ ಹಾಗೂ ಅವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ತಂಬಾಕು ಉತ್ಪನ್ನ ಸೇರಿದಂತೆ ಮಾದಕ ವಸ್ತುಗಳ ದುಶ್ಚಟಗಳಿಗೆ ಕಾರ್ಮಿಕರು ಒಳಗಾಗುತ್ತಿದ್ದಾರೆ. ಇವರಿಗೆ ಅರಿವು ಮೂಡಿಸುವುದು ಸೇರಿದಂತೆ ಮನಪರಿವರ್ತನೆಯ ಕಾರ್ಯಕ್ರಮಗಳನ್ನು ಕಾರ್ಮಿಕ ಇಲಾಖೆ ನಡೆಸಬೇಕು. ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿಯೇ ಇಂಥ ಕಾರ್ಯಕ್ರಮ ನಡೆಸಿ ವ್ಯಸನ ಬಿಡಿಸಬೇಕು’ ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಕೆಜಿಎಪ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಅಬಕಾರಿ ಉಪ ಆಯುಕ್ತೆ ಸೈಯದ್ ಅಜ್ಮತ್ ಆಫ್ರಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.