ADVERTISEMENT

ಮುಳಬಾಗಿಲು: ಕುಡುಕರ ಅಡ್ಡೆಯಾದ ರೈತರ ಒಕ್ಕಣೆ ಕಣ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 13:32 IST
Last Updated 11 ಸೆಪ್ಟೆಂಬರ್ 2024, 13:32 IST
ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿ ಹೊರವಲಯದ ಒಕ್ಕಣೆ ಕಣದಲ್ಲಿ ಮದ್ಯಪಾನದ ಖಾಲಿ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದಿರುವುದು.
ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿ ಹೊರವಲಯದ ಒಕ್ಕಣೆ ಕಣದಲ್ಲಿ ಮದ್ಯಪಾನದ ಖಾಲಿ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದಿರುವುದು.   

ಮುಳಬಾಗಿಲು: ತಾಲ್ಲೂಕಿನ ಹೆಬ್ಬಣಿ ಗ್ರಾಮದ ಹೊರವಲಯದ ಹಳ್ಳಿ ಸಂತೆ ಕಟ್ಟೆಯ ಪಕ್ಕದಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಿರುವ ರೈತರ ಒಕ್ಕಣೆ ಕಣ ಕುಡುಕರಿಗೆ ಅಡ್ಡೆಯಾಗಿ ಬದಲಾಗಿದೆ.

ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿ ಗ್ರಾಮ ಪಂಚಾಯತಿ ವತಿಯಿಂದ ಬಂಗವಾದಿ ಹಾಗೂ ಹೆಬ್ಬಣಿ ಗ್ರಾಮಗಳ ಮಧ್ಯದಲ್ಲಿ ರೈತರಿಗೆ ಒಕ್ಕಣೆಗೆಂದು ನರೇಗಾ ಯೋಜನೆಯಲ್ಲಿ ಸಿಮೆಂಟ್ ನೆಲಹಾಸನ್ನು ಹಾಕಿ ಸುಸಜ್ಜಿತವಾದ ರೀತಿಯಲ್ಲಿ ನಿರ್ಮಿಸಲಾಗಿರುವ ಕಣದಲ್ಲಿ ಕುಡುಕರು ಪ್ರತಿದಿನ ಮದ್ಯಪಾನ ಮಾಡಿ ಖಾಲಿ ಬಾಟಲಿಗಳನ್ನು ಹಾಗೂ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಹಾಕುತ್ತಿರುವುದರಿಂದ ಸುತ್ತಮುತ್ತಲಿನ ಜನ ಕಾಲಿಡಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಹೆಬ್ಬಣಿಯಿಂದ ಕೇವಲ ಕೆಲವೇ ಕಿಲೋಮೀಟರುಗಳ ಸಮೀಪದಲ್ಲಿ ಇರುವ ಆಂಧ್ರಪ್ರದೇಶದ ಪುಂಗನೂರು ಕಡೆಗೆ ಪ್ರತಿದಿನ ಸಾವಿರಾರು ಮಂದಿ ಸಂಚರಿಸುತ್ತಾರೆ.ಆದರೆ ರಾಜ್ಯದಿಂದ ಆಂಧ್ರಕ್ಕೆ ಮದ್ಯಪಾನವನ್ನು ಸಾಗಿಸಲು ಅವಕಾಶ ಇಲ್ಲದೆ ಇರುವುದರಿಂದ ಆಂಧ್ರದ ಕೆಲವರು ಹೆಬ್ಬಣಿ ಮತ್ತಿತರ ಕಡೆ ಇರುವ ಬಾರುಗಳಲ್ಲಿ ಮದ್ಯವನ್ನು ಖರೀದಿಸಿ ರಸ್ತೆಗೆ ಹೊಂದಿಕೊಂಡಂತೆ ಇರುವ ಕಣದಲ್ಲಿ ಬೆಳಿಗ್ಗೆ ರಾತ್ರಿ ಎನ್ನದೆ ಕುಡಿದು ಬಾಟಲುಗಳು ಹಾಗೂ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಬಿಸಾಡಿ ಹೋಗುತ್ತಿದ್ದಾರೆ.ಇದರಿಂದ ಕಣದ ತುಂಬಾ ಮದ್ಯಪಾನದ ಬಾಟಲಿಗಳು ಹಾಗೂ ಇತರೆ ತ್ಯಾಜ್ಯ ತುಂಬಿಕೊಂಡಿದೆ.ಇದರಿಂದ ಸುತ್ತಮುತ್ತಲಿನ ಜನ ಕಣದ ಬಳಿ ಒಡೆದು ಹಾಕಿರುವ ಗಾಜಿನ ಚೂರುಗಳ ಬಳಿ ಕಾಲಿಡಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದರು.

ADVERTISEMENT

ಮದ್ಯದ ಬಾಟಲಿಗಳನ್ನು ಕೆಲವರು ಕಣದಲ್ಲಿ ಒಡೆದು ಚೂರು ಚೂರು ಮಾಡಿದ್ದಾರೆ.ಇದರಿಂದ ಕುರಿಗಾಹಿಗಳು ಹಾಗೂ ಜಾನುವಾರುಗಳನ್ನು ಮೇಯಿಸುವವರು ಭಯದಿಂದ ತಮ್ಮ ಜಾನುವಾರುಗಳನ್ನು ಬಿಡುವಂತಾಗಿದೆ.ಅಕಸ್ಮಾತ್ತಾಗಿ ಕಾಲುಗಳಿಗೋ ಅಥವಾ ಜಾನುವಾರುಗಳು ತಿನ್ನುವ ಮೇವಿನಲ್ಲಿ ಗಾಜಿನ ಚೂರುಗಳನ್ನೇನಾದರೂ ತಿಂದರೆ ಸಮಸ್ಯೆ ಕಟ್ಟಿಟ್ಟಂತೆ ಎಂದು ಕುರಿಗಾಹಿಗಳು ಹೇಳಿದರು.

ಇನ್ನು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸುವ ಹೆಬ್ಬಣಿ ಗ್ರಾಮ ಪಂಚಾಯತಿ ಸಿಬ್ಬಂದಿ ಸಮಸ್ಯೆಯನ್ನು ಕಣ್ಣಾರೆ ನೋಡಿದರೂ ತಮಗೆ ಸಂಭಂದವೇ ಇಲ್ಲ ಎನ್ನುವ ರೀತಿಯಲ್ಲಿ ಸಂಚರಿಸುತ್ತಿರುವುದು ವಿಪರ್ಯಾಸದ ಸಂಗತಿ.ಹೀಗಾಗಿ ಕೂಡಲೇ ಪಂಚಾಯತಿ ಕುಡುಕರಿಗೆ ಕಣದಲ್ಲಿ ಕುಡಿಯದಂತೆ ಎಚ್ಚರಿಕೆ ಕೊಟ್ಟು ಕೂಡಲೇ ಬಾಟಲಿಗಳನ್ನು ಸ್ವಚ್ಚ ಮಾಡಲು ಮುಂದಾಗಬೇಕಾಗಿದೆ ಎಂದು ಸ್ಥಳೀಯ ಗ್ರಾಮದ ಉಪನ್ಯಾಸಕ ರವಿ ಹೇಳಿದರು.

ಈ ಸಂಭಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೌಸ್ ರನ್ನು ಸಂಪರ್ಕಿಸಿದರೆ ಕುಡುಕರು ರಾತ್ರಿ ವೇಳೆಯಲ್ಲಿ ಒಕ್ಕಣೆ ಕಣದಲ್ಲಿ ಕುಡಿದರೆ ನಾವು ಕಾವಲಿರಲಾಗುವುದಿಲ್ಲ. ಇನ್ನು ಒಕ್ಕಣೆ ಕಣದಲ್ಲಿ ಬಾಟಲಿಗಳು ಬಿದ್ದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಜಲಗಾರರನ್ನು ಕಳುಹಿಸಿ ಸ್ವಚ್ಚ ಮಾಡಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.