ADVERTISEMENT

ಕೋಲಾರ: ಜಿಲ್ಲೆಯಲ್ಲಿ 19ಕ್ಕೆ ಇ–ಲೋಕ ಅದಾಲತ್‌

1,678 ಪ್ರಕರಣ ಗುರುತು: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 13:00 IST
Last Updated 4 ಸೆಪ್ಟೆಂಬರ್ 2020, 13:00 IST
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್ ಕೋಲಾರದಲ್ಲಿ ಶುಕ್ರವಾರ ಇ–ಲೋಕ ಅದಾಲತ್ ಸಂಬಂಧ ಮಾಹಿತಿ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್ ಕೋಲಾರದಲ್ಲಿ ಶುಕ್ರವಾರ ಇ–ಲೋಕ ಅದಾಲತ್ ಸಂಬಂಧ ಮಾಹಿತಿ ನೀಡಿದರು.   

ಕೋಲಾರ: ‘ಜಿಲ್ಲೆಯಲ್ಲಿ ಸೆ.19ರಂದು ಇ–ಲೋಕ ಅದಾಲತ್ ಹಮ್ಮಿಕೊಂಡಿದ್ದು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕಕ್ಷಿದಾರರು ಅದಾಲತ್‌ನ ಸದುಪಯೋಗ ಪಡೆಯಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈಗಾಗಲೇ ಆ.24ರಿಂದ ಲೋಕ ಆದಾಲತ್ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯಲ್ಲಿ 39,181 ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಈ ಪೈಕಿ 1,678 ಪ್ರಕರಣಗಳನ್ನು ಇ–ಲೋಕ ಅದಾಲತ್‌ನಲ್ಲಿ ಬಗೆಹರಿಸಲು ಗುರುತಿಸಲಾಗಿದೆ’ ಎಂದು ವಿವರಿಸಿದರು.

‘ಕೋಲಾರ ತಾಲ್ಲೂಕಿನ 758, ಕೆಜಿಎಫ್‌ ತಾಲ್ಲೂಕಿನ 239, ಬಂಗಾರಪೇಟೆ ತಾಲ್ಲೂಕಿನ 58, ಮುಳಬಾಗಿಲು ತಾಲ್ಲೂಕಿನ 148, ಶ್ರೀನಿವಾಸಪುರ ತಾಲ್ಲೂಕಿನ 45 ಹಾಗೂ ಮಾಲೂರು ತಾಲ್ಲೂಕಿನ 413 ಪ್ರಕರಣಗಳನ್ನು ಇ–ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಇ–ಲೋಕ ಆದಾಲತ್ ವ್ಯಾಪ್ತಿಯಲ್ಲಿ ಸಿವಿಲ್, ಕೌಟುಂಬಿಕ ವಿವಾದ, ಜೀವ ವಿಮೆ, ಬ್ಯಾಂಕ್‌, ಹಣಕಾಸು, ವಿದ್ಯುತ್ ಸಂಬಂಧಿತ, ವಿಮಾ ಕಂಪನಿ ಪ್ರಕರಣಗಳು ಹಾಗೂ ರಾಜಿ ಮಾಡಬಹುದಾದ ಪ್ರಕರಣ ಇತ್ಯರ್ಥಪಡಿಸಬಹುದು. ರಾಜಿ ಮಾಡಿಕೊಳ್ಳಲು ಇಚ್ಛೆಯುಳ್ಳವರು ವಿಡಿಯೋ ಸಂವಾದದ ಮೂಲಕ ಅದಾಲತ್‌ನಲ್ಲಿ ವಕೀಲರೊಂದಿಗೆ ಭಾಗಹಿಸಬೇಕು’ ಎಂದರು.

‘ಪ್ರಕರಣಗಳ ನೋಟಿಸ್‌ನಲ್ಲಿ ನೀಡಿರುವ ಲಿಂಕ್ ಬಳಸಿ ಮನೆಯಿಂದಲೇ ವಿಡಿಯೋ ಸಂವಾದದ ಮೂಲಕ ರಾಜಿ ಮಾಡಿಕೊಳ್ಳಬಹುದು. ಪ್ರತಿ ತಿಂಗಳು ಲೋಕ ಆದಾಲತ್ ನಡೆಯುತಿತ್ತು. ಆದರೆ, ಕೋವಿಡ್-19 ಕಾರಣಕ್ಕೆ ದೇಶದಲ್ಲಿ ಇದೇ ಮೊದಲ ಬಾರಿಗೆ ಇ–ಲೋಕ ಅದಾಲತ್‌ ನಡೆಸಲಾಗುತ್ತಿದೆ. ನ್ಯಾಯಾಂಗ ಬಂಧನದಲ್ಲಿ ಇರುವವರು ಜೈಲಿನಿಂದಲೇ ಅದಾಲತ್‌ನಲ್ಲಿ ಭಾಗವಹಿಸಬಹುದು’ ಎಂದು ಹೇಳಿದರು.

ಮೇಲ್ಮನವಿ ಅವಕಾಶವಿಲ್ಲ: ‘ನ್ಯಾಯಾಲಯದಲ್ಲಿ ಇನ್ನೂ ದಾಖಲಾಗದ ಕಾರ್ಪೋರೇಷನ್ ಟ್ಯಾಕ್ಸ್, ಫೋನ್‌ ಬಿಲ್, ವಿದ್ಯುತ್ ಬಿಲ್, ಗೃಹ ತೆರಿಗೆ ಪ್ರಕರಣಗಳನ್ನು ಸಹ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು. ಬೆಂಗಳೂರಿನಲ್ಲಿ ವರ್ಷವಿಡೀ ಅದಾಲತ್‌ ನಡೆಯುತ್ತದೆ. ಅದಾಲತ್‌ನಲ್ಲಿ ಇತ್ಯರ್ಥವಾದ ಪ್ರಕರಣಗಳ ಸಂಬಂಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಇತ್ಯರ್ಥವಾಗದ ಪ್ರಕರಣಗಳನ್ನು ಲೋಕ ಅದಾಲತ್ ಸದಸ್ಯರು ಇತ್ಯರ್ಥಪಡಿಸುತ್ತಾರೆ. ಇದರಿಂದ ಪುನರಾವರ್ತಿತ ವ್ಯಾಜ್ಯ ತಡೆಹಿಡಿಯಬಹುದು’ ಎಂದರು.

‘ಜಿಲ್ಲೆಯಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರವಾಗಿ ಈಗಾಗಲೇ ಪೊಲೀಸರು, ವಿಮಾ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸಲಾಗಿದೆ. ಕೆಜಿಎಫ್‌ನಲ್ಲಿ ಮೋಟಾರು ವಾಹನಗಳಿಗೆ ಸಂಬಂಧಿಸಿದ ಪ್ರಕರಣ ಇತ್ಯರ್ಥಪಡಿಸಲಾಗುತ್ತಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ ಚನ್ನಬಸಪ್ಪ ಹಡಪದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.