ADVERTISEMENT

ಕೋಲಾರ: ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣು

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:11 IST
Last Updated 14 ಅಕ್ಟೋಬರ್ 2020, 18:11 IST
ಸಿ.ಸತ್ಯಭಾಮ
ಸಿ.ಸತ್ಯಭಾಮ   

ಕೋಲಾರ: ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿದ್ದು, ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಪಕ್ಷೇತರರು ಸೇರಿದಂತೆ ಅಂತಿಮವಾಗಿ 15 ಮಂದಿ ಅಭ್ಯರ್ಥಿಗಳಿದ್ದು, ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ತೀವ್ರ ಕಸರತ್ತು ನಡೆಸಿದ್ದಾರೆ. ಹಣ ಹಂಚಿಕೆ ಹಾಗೂ ಉಡುಗೊರೆ ನೀಡಿಕೆಯ ಗುಸುಗುಸು ಕೇಳಿ ಬರುತ್ತಿದ್ದು, ಜಿಲ್ಲಾಡಳಿತವು ಚುನಾವಣಾ ಅಕ್ರಮ ತಡೆಗೆ ಕಟ್ಟೆಚ್ಚರ ವಹಿಸಿದೆ.

ಅ.28ರಂದು ಮತದಾನ ನಡೆಯಲಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯ ಪಕ್ಷಗಳಿಂದ 3 ಅಭ್ಯರ್ಥಿಗಳು, ನೋಂದಾಯಿತ ರಾಜಕೀಯ ಪಕ್ಷಗಳಿಂದ 2 ಅಭ್ಯರ್ಥಿಗಳು ಹಾಗೂ ಪಕ್ಷೇತರರಾಗಿ 10 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜಿಲ್ಲೆಯ ಆರ್‌.ಚೌಡರೆಡ್ಡಿ ತೂಪಲ್ಲಿ ಅವರು ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಕೋಲಾರದ ಜೆ.ವೆಂಕಟಾಚಲಪತಿ ಮತ್ತು ಹೊಸಮಟ್ನಹಳ್ಳಿಯ ಎಸ್‌.ಸತೀಶ್‌ಗೌಡ ಅವರು ಪಕ್ಷೇತರರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟಾರೆ 21,521 ಮಂದಿ ಪದವೀಧರ ಮತದಾರರಿದ್ದಾರೆ. ಈ ಪೈಕಿ 13,061 ಮಂದಿ ಪುರುಷ ಮತ್ತು 8,460 ಮಂದಿ ಮಹಿಳಾ ಮತದಾರರಿದ್ದಾರೆ. ಆರು ತಾಲ್ಲೂಕುಗಳಿಂದ ಒಟ್ಟಾರೆ 36 ಮತಗಟ್ಟೆ ಸ್ಥಾಪಿಸಲಾಗಿದೆ. ಇದರಲ್ಲಿ 27 ಮುಖ್ಯ ಮತಗಟ್ಟೆ ಮತ್ತು 9 ಹೆಚ್ಚುವರಿ ಮತಗಟ್ಟೆ ಸೇರಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕಕರು ಸೇರಿದಂತೆ 250 ಮಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಯಾವುದೇ ಅಡೆತಡೆ ಇಲ್ಲದೆ ಪಾರದರ್ಶಕವಾಗಿ ಚುನಾವಣೆ ನಡೆಸುವ ಉದ್ದೇಶಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ತಲಾ 4 ಮಂದಿ ಒಳಗೊಂಡ 18 ಫ್ಲೈಯಿಂಗ್‌ ಸ್ಕ್ವಾಡ್‌, ತಲಾ 3 ಮಂದಿ ಒಳಗೊಂಡ 6 ವಿಶೇಷ ವಿಡಿಯೋ ತಂಡ ರಚಿಸಲಾಗಿದೆ. ಪ್ರತಿ ಹೋಬಳಿಗೆ ಒಬ್ಬರಂತೆ 27 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ತಂಡ ರಚನೆ: ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ 1 ಮತ್ತು ಪ್ರತಿ ತಾಲ್ಲೂಕಿಗೆ ಒಂದರಂತೆ 6 ತಂಡಗಳನ್ನು ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರು ಜಿಲ್ಲಾ ಮಟ್ಟದ ತಂಡಕ್ಕೆ ನೋಡಲ್‌ ಅಧಿಕಾರಿಯಾಗಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ.

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾ ಇಡಲು ಮಾದರಿ ನೀತಿಸಂಹಿತೆ ತಂಡ ರಚಿಸಲಾಗಿದೆ. ಈ ತಂಡದಲ್ಲಿ ಜಿಲ್ಲಾಧಿಕಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು, ದಿನಪತ್ರಿಕೆಯೊಂದರ ಪ್ರತಿನಿಧಿ, ಡಿಐಒ, ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ.

ನಿಯಂತ್ರಣ ಕೊಠಡಿ: ಚುನಾವಣಾ ಅಕ್ರಮಗಳಿಗೆ ಸಂಬಂಧಪಟ್ಟ ದೂರುಗಳ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 1 ಮತ್ತು ತಾಲ್ಲೂಕುಗಳಲ್ಲಿ ತಲಾ ಒಂದರಂತೆ 6 ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಅ.16, ಅ.20 ಮತ್ತು ಮಸ್ಟರಿಂಗ್ ದಿನವಾದ ಅ.27ರಂದು ತರಬೇತಿ ನೀಡಲಾಗುತ್ತದೆ. ಕೆಜಿಎಫ್‌ ತಾಲ್ಲೂಕು ಹೊರತುಪಡಿಸಿ ಇತರೆ 5 ತಾಲ್ಲೂಕುಗಳಲ್ಲಿ ತಹಶೀಲ್ದಾರ್‌ ಕಚೇರಿಗಳಲ್ಲಿ ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಕೇಂದ್ರ ಸ್ಥಾಪಿಸಲಾಗಿದೆ. ಕೆಜಿಎಫ್‌ ತಾಲ್ಲೂಕಿನಲ್ಲಿ ಮಾತ್ರ ಕೆಜಿಎಫ್‌ ನಗರಸಭೆ ಕಚೇರಿಯಲ್ಲಿ ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಕೇಂದ್ರ ಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.