ADVERTISEMENT

‘ದಂಡದ ಅಸ್ತ್ರ’ಕ್ಕೂ ಬಗ್ಗದ ಶಿಕ್ಷಣ ಸಂಸ್ಥೆಗಳು

ಶಾಲಾ ವಾಹನ ಮಾರ್ಗಸೂಚಿ ಆಟಕ್ಕುಂಟು ಲೆಕ್ಕಕ್ಕಿಲ್ಲ: ಮಕ್ಕಳ ಜೀವದ ಜತೆ ಚೆಲ್ಲಾಟ

ಜೆ.ಆರ್.ಗಿರೀಶ್
Published 14 ಜುಲೈ 2019, 19:30 IST
Last Updated 14 ಜುಲೈ 2019, 19:30 IST
ಕೋಲಾರದ ಖಾಸಗಿ ಶಾಲೆಯೊಂದರ ಮಕ್ಕಳು ಆಟೊದಿಂದ ಇಳಿಯುತ್ತಿರುವುದು.
ಕೋಲಾರದ ಖಾಸಗಿ ಶಾಲೆಯೊಂದರ ಮಕ್ಕಳು ಆಟೊದಿಂದ ಇಳಿಯುತ್ತಿರುವುದು.   

ಕೋಲಾರ: ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳಿಗೆ ರೂಪಿಸಿರುವ ಸುರಕ್ಷತಾ ಮಾರ್ಗಸೂಚಿಯು ನಗರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಆನೆ ನಡೆದದ್ದೆ ದಾರಿ ಎಂಬಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಗ್ಧ ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿವೆ.

ಶಾಲಾ ವಾಹನ ಶುಲ್ಕದ ಸೋಗಿನಲ್ಲಿ ಪೋಷಕರಿಂದ ಸಾವಿರಗಟ್ಟಲೇ ಹಣ ವಸೂಲು ಮಾಡುವ ಶಿಕ್ಷಣ ಸಂಸ್ಥೆಗಳು ಮಕ್ಕಳ ಸುರಕ್ಷತೆಯನ್ನು ನಿರ್ಲಕ್ಷಿಸಿವೆ. ಹಣ ಉಳಿಸಲು ಕಳ್ಳ ದಾರಿ ಹಿಡಿದಿರುವ ಶಿಕ್ಷಣ ಸಂಸ್ಥೆಗಳು ಸುರಕ್ಷತಾ ಮಾರ್ಗಸೂಚಿ ನಿಯಮಗಳನ್ನು ಗಾಳಿಗೆ ತೂರಿವೆ.

ಮಕ್ಕಳನ್ನು ಕುರಿಗಳಂತೆ ವಾಹನದಲ್ಲಿ ತುಂಬಿಸಿ ಕರೆದೊಯ್ಯುವುದು, ಅತಿ ವೇಗದ ಚಾಲನೆ, ವಾಹನದ ಒಳಾಂಗಣ ವಿನ್ಯಾಸ ಬದಲು, ಅನಾನುಭವಿ ಚಾಲಕರ ನೇಮಕ, ಸುಸ್ಥಿತಿಯಲ್ಲಿರದ ಹಳೆ ವಾಹನಗಳ ಬಳಕೆ, ಸರಕು ಸಾಗಣೆ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವುದು ಸಾಮಾನ್ಯವಾಗಿದೆ.

ADVERTISEMENT

ನಗರದಲ್ಲಿ ಸದ್ಯ 60 ಖಾಸಗಿ ಹಾಗೂ 20 ಅನುದಾನಿತ ಪ್ರಾಥಮಿಕ ಶಾಲೆಗಳಿವೆ. ಅಲ್ಲದೇ, 40 ಖಾಸಗಿ ಮತ್ತು 5 ಅನುದಾನಿತ ಪ್ರೌಢ ಶಾಲೆಗಳಿವೆ. ಈ ಶಾಲೆಗಳಲ್ಲಿನ ಬಹುಪಾಲು ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಹೋಗಿ ಬರಲು ಶಾಲಾ ವಾಹನಗಳನ್ನು ಅವಲಂಬಿಸಿದ್ದಾರೆ. ಬೆರಳೆಣಿಕೆ ಮಕ್ಕಳು ಪೋಷಕರ ಜತೆ ಬೈಕ್‌ ಅಥವಾ ಕಾರುಗಳಲ್ಲಿ ಶಾಲೆಗೆ ಬಂದು ಹೋಗುತ್ತಾರೆ. ಮತ್ತೆ ಕೆಲ ಮಕ್ಕಳು ಸೈಕಲ್‌ನಲ್ಲಿ ಶಾಲೆಗೆ ಬರುತ್ತಾರೆ.

ಶಾಲಾ ವಾಹನ ಶುಲ್ಕ ಹೆಚ್ಚಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಪೋಷಕರು ಆಟೊಗಳ ಮೊರೆ ಹೋಗಿದ್ದಾರೆ. ಆಟೊಗಳಲ್ಲಿ ಶುಲ್ಕ ಕಡಿಮೆ ಎಂಬುದು ಇದಕ್ಕೆ ಮುಖ್ಯ ಕಾರಣ. ಆದರೆ, ಸುರಕ್ಷತಾ ಮಾರ್ಗಸೂಚಿ ಪ್ರಕಾರ ಆಟೊಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವಂತಿಲ್ಲ. ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಪೊಲೀಸರು ಈ ಸಂಗತಿ ಮನವರಿಕೆ ಮಾಡಿಕೊಟ್ಟರೂ ಪೋಷಕರು ಹಣ ಉಳಿಸಲು ಆಟೊಗಳಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.

ಡಿಇಆರ್‌ಎ ರಚನೆ: ಶಿಕ್ಷಣ ಸಂಸ್ಥೆಗಳು ಸ್ವಂತ ವಾಹನ ಹೊಂದಿದ್ದರೆ ಸುಪ್ರೀಂ ಕೋರ್ಟ್ ನಿರ್ದೇಶನದ ಸುರಕ್ಷತಾ ಮಾರ್ಗಸೂಚಿ ಪಾಲಿಸಬೇಕು. ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಂಡು ವಾಹನಗಳನ್ನು ಬಳಕೆ ಮಾಡುತ್ತಿರುವವರು ರಾಜ್ಯ ಸರ್ಕಾರದ ಸುರಕ್ಷತಾ ನಿಯಮಾವಳಿ ಪಾಲಿಸಬೇಕು.

ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಶಾಲೆಗಳಲ್ಲಿನ ಮಕ್ಕಳ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಮತ್ತು ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (ಡಿಇಆರ್‌ಎ) ರಚಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಶಿಕ್ಷಣ, ಸಾರಿಗೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳಿದ್ದಾರೆ. ಈ ಸಮಿತಿಯು ಕಾಲ ಕಾಲಕ್ಕೆ ಶಾಲಾ ಆಡಳಿತ ಮಂಡಳಿ ಸದಸ್ಯರು, ವಾಹನ ಚಾಲಕರು ಹಾಗೂ ಪೋಷಕರ ಜತೆ ಸಭೆ ನಡೆಸಿ ಮಕ್ಕಳ ಸುರಕ್ಷತೆ ವಿಚಾರವಾಗಿ ಪರಾಮರ್ಶೆ ನಡೆಸುತ್ತದೆ. ಜತೆಗೆ ಸುರಕ್ಷತೆ ಸಂಬಂಧ ಸಲಹೆ ಸೂಚನೆಗಳನ್ನು ನೀಡುತ್ತದೆ.

ಸಮನ್ವಯ ಕೊರತೆ: ಶಾಲಾ ವಾಹನ ಹಾಗೂ ಮಕ್ಕಳ ಪ್ರಯಾಣಕ್ಕೆ ಸಂಬಂಧಿಸಿದ ವಿಚಾರವು ಪೊಲೀಸ್‌ ಮತ್ತು ಸಾರಿಗೆ ಇಲಾಖೆಗೆ ಸಂಬಂಧಿಸಿದ್ದು ಎಂಬುದು ಶಿಕ್ಷಣ ಇಲಾಖೆಯ ನಿಲುವು. ಶಿಕ್ಷಣ ಇಲಾಖೆ ಅಧಿಕಾರಿಗಳು ಸುರಕ್ಷತಾ ಮಾರ್ಗಸೂಚಿ ವಿಚಾರವಾಗಿ ಶಾಲಾ ವಾಹನಗಳ ಮೇಲೆ ಕಣ್ಣಿಡಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಪೊಲೀಸರು ಶಿಕ್ಷಣ ಹಾಗೂ ಸಾರಿಗೆ ಇಲಾಖೆಯತ್ತ ಬೆಟ್ಟು ತೋರುತ್ತಾರೆ.

ಸಂಚಾರ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ಶೈಕ್ಷಣಿಕ ವರ್ಷದ ಆರಂಭದಲ್ಲಿ ಆಗೊಮ್ಮೆ ಈಗೊಮ್ಮೆ ಶಾಲಾ ವಾಹನಗಳನ್ನು ತಪಾಸಣೆ ಮಾಡುತ್ತಾರೆ. ಚಾಲಕರ ಚಾಲನಾ ಪರವಾನಗಿ, ವಾಹನದ ರಹದಾರಿ ಪತ್ರ, ವಾಹನ ವಿಮೆ ನವೀಕರಣ ಪರಿಶೀಲಿಸಿ ಕೈ ಚೆಲ್ಲುತ್ತಾರೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಸುರಕ್ಷತೆ ಮರೀಚಿಕೆಯಾಗಿದೆ. ಮಕ್ಕಳು ಪ್ರತಿನಿತ್ಯ ಜೀವ ಭಯದ ನಡುವೆ ಶಾಲಾ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

₹ 65 ಸಾವಿರ ದಂಡ: ಸಂಚಾರ ಪೊಲೀಸರು ಕಳೆದ 10 ದಿನದಲ್ಲಿ ನಗರದ ವಿವಿಧೆಡೆ ಶಾಲಾ ವಾಹನಗಳನ್ನು ತಪಾಸಣೆ ಮಾಡಿ ಸುರಕ್ಷತಾ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಸುಮಾರು 60 ಪ್ರಕರಣ ದಾಖಲಿಸಿದ್ದಾರೆ. ಅತಿ ವೇಗದ ಚಾಲನೆ, ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಸಂಬಂಧ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ₹ 65 ಸಾವಿರ ದಂಡ ಸಂಗ್ರಹಿಸಿದ್ದಾರೆ. ಜತೆಗೆ ಕೆಲ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಪೊಲೀಸರ ತಪಾಸಣೆ ವೇಳೆ ಸಾಕಷ್ಟು ಚಾಲಕರ ಬಳಿ ಚಾಲನಾ ಪರವಾನಗಿಯೇ (ಡಿ.ಎಲ್) ಇಲ್ಲದಿರುವ, ವಾಹನದ ರಹದಾರಿ ಪತ್ರ (ಪರ್ಮಿಟ್‌) ನವೀಕರಣ ಮಾಡಿಸದಿರುವ ಸಂಗತಿ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರ ಚಾಲನಾ ಪರವಾನಗಿ ಮತ್ತು ವಾಹನದ ರಹದಾರಿ ಪತ್ರ ರದ್ದುಪಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಒ) ಪತ್ರ ಬರೆದಿದ್ದಾರೆ. ‘ದಂಡದ ಅಸ್ತ್ರ’ಕ್ಕೂ ಬಗ್ಗದ ಶಿಕ್ಷಣ ಸಂಸ್ಥೆಗಳು ಮಕ್ಕಳ ಸುರಕ್ಷತೆ ವಿಚಾರದಲ್ಲಿ ಜಾಣಕುರುಡು ಮುಂದುವರಿಸಿವೆ.

ಅಂಕಿ ಅಂಶ
* 60 ಖಾಸಗಿ ಪ್ರಾಥಮಿಕ ಶಾಲೆ
* 40 ಖಾಸಗಿ ಪ್ರೌಢ ಶಾಲೆಗಳು
* 60 ಪ್ರಕರಣ ದಾಖಲು
* ₹ 65 ಸಾವಿರ ದಂಡ ಸಂಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.