ADVERTISEMENT

ಜಿಲ್ಲೆಯಲ್ಲಿ ಈದ್ ಮಿಲಾದ್‌ ಸರಳ ಆಚರಣೆ

ಅದ್ಧೂರಿ ಮೆರವಣಿಗೆ–ಸಾಮೂಹಿಕ ಪ್ರಾರ್ಥನೆಗೆ ಜಿಲ್ಲಾಡಳಿತದ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 13:38 IST
Last Updated 19 ಅಕ್ಟೋಬರ್ 2021, 13:38 IST
ಈದ್ ಮಿಲಾದ್‌ ಹಬ್ಬದ ಅಂಗವಾಗಿ ಕೋಲಾರದ ಶಾರದಾ ಚಿತ್ರಮಂದಿರ ರಸ್ತೆಯ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಮಂಗಳವಾರ ಪ್ರಾರ್ಥನೆ ಸಲ್ಲಿಸಿದರು
ಈದ್ ಮಿಲಾದ್‌ ಹಬ್ಬದ ಅಂಗವಾಗಿ ಕೋಲಾರದ ಶಾರದಾ ಚಿತ್ರಮಂದಿರ ರಸ್ತೆಯ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಮಂಗಳವಾರ ಪ್ರಾರ್ಥನೆ ಸಲ್ಲಿಸಿದರು   

ಕೋಲಾರ: ಶಾಂತಿಧೂತ ಪ್ರವಾದಿ ಮಹಮ್ಮದ್ ಪೈಗಂಬರ್‌ರ ಜನ್ಮ ದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಜಿಲ್ಲೆಯಾದ್ಯಂತ ಮಂಗಳವಾರ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಕೋವಿಡ್‌ ಕಾರಣಕ್ಕೆ ಈ ಬಾರಿ ಹಬ್ಬದ ಆಚರಣೆ ಸರಳವಾಗಿತ್ತು. ಹಿಂದಿನ ವರ್ಷದಂತೆ ಅದ್ಧೂರಿ ಮೆರವಣಿಗೆ ಇರಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮೆರವಣಿಗೆಗೆ ಮತ್ತು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಿಲ್ಲ.

ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಗಳ ರಸ್ತೆಗಳನ್ನು ಹಬ್ಬದ ಅಂಗವಾಗಿ ಸಿಂಗರಿಸಲಾಗಿತ್ತು. ಮಸೀದಿ, ದರ್ಗಾಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಮಸೀದಿಗಳಿಗೆ ಬಂದ ಪ್ರತಿಯೊಬ್ಬರು ಮಾಸ್ಕ್‌ ಧರಿಸಿದ್ದರು. ಮಸೀದಿಗಳ ಪ್ರವೇಶ ಭಾಗದಲ್ಲೇ ಕೈಗಳಿಗೆ ಸ್ಯಾನಿಟೈಸರ್‌ ನೀಡಲಾಯಿತು. ಮಸೀದಿಯೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರದೆ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಲಾಯಿತು.

ADVERTISEMENT

‘ಕೋವಿಡ್‌ ಕಾರಣಕ್ಕೆ ಇಡೀ ವಿಶ್ವ ಸಂಕಷ್ಟದಲ್ಲಿರುವಾಗ ಸಂಭ್ರಮಪಡಬಾರದು’ ಎಂದು ಧಾರ್ಮಿಕ ಗುರುಗಳು ಹಾಗೂ ವಕ್ಫ್ ಮಂಡಳಿ ಅಧ್ಯಕ್ಷರು ಮುಂಚೆಯೇ ಸೂಚನೆ ನೀಡಿದ್ದರು. ಹೀಗಾಗಿ ಧರ್ಮ ಗುರು, ಮೌಲ್ವಿ, ಪೇಶ್‌ಇಮಾಮ್‌, ಮೌಝಿನ್‌ ಸಿಬ್ಬಂದಿ ಹಾಗೂ ಸಮುದಾಯದ ಮುಖಂಡರು ಸೇರಿದಂತೆ ಕೆಲವೇ ಮಂದಿ ಮಾತ್ರ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿದರು.

ಹಿರಿಯರು, ಮಕ್ಕಳು ಮಸೀದಿಗಳಿಗೆ ಬರಲಿಲ್ಲ. ಬದಲಿಗೆ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಕೊರೊನಾ ಸೋಂಕಿನ ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಮೊರೆಯಿಟ್ಟರು. ಮಹಿಳೆಯರು ಮನೆಗಳಲ್ಲೇ ಅಲ್ಲಾಹುವನ್ನು ಸ್ಮರಿಸಿದರು.

ಮಸೀದಿಯೊಳಗೆ ಮುಸ್ಲಿಮರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ರಸ್ತೆಗಳಲ್ಲಿ ಮಾರ್ಗ ಮಧ್ಯೆ ಸಿಕ್ಕ ಸ್ನೇಹಿತರಿಗೆ, ಸಂಬಂಧಿಗಳಿಗೆ ದೂರದಿಂದಲೇ ಹಬ್ಬದ ಶುಭಾಶಯ ಕೋರಿದರು. ಅನೇಕರು ವಾಟ್ಸ್‌ಆ್ಯಪ್‌ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ರವಾನಿಸಿದರು. ಫೋನ್ ಕರೆ ಮೂಲಕವೂ ಪ್ರೀತಿ ಪಾತ್ರರಿಗೆ ಶುಭಾಶಯ ಹೇಳಿದರು.

ಮೈದಾನದಲ್ಲಿ ಸಡಗರವಿಲ್ಲ: ಈದ್‌ ಮಿಲಾದ್‌ ಹಬ್ಬದ ಶ್ವೇತ ವರ್ಣದ ದಿನ ಹೊಸ ಬಟ್ಟೆ ಧರಿಸಿ, ರಂಗು ರಂಗಿನ ಟೋಪಿ ತೊಟ್ಟು ಸಾವಿರಾರು ಮಂದಿ ಏಕಕಾಲಕ್ಕೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಮೌಲ್ವಿ, ಧರ್ಮ ಗುರುಗಳ ಧಾರ್ಮಿಕ ಸಂದೇಶ ಆಲಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.

ಆದರೆ, ಈ ಬಾರಿ ಕೋವಿಡ್‌ ಆತಂಕದ ಕಾರಣಕ್ಕೆ ಜಿಲ್ಲಾಡಳಿತವು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಿದ್ದರಿಂದ ಸಮುದಾಯದವರು ಮಸೀದಿಗಳಲ್ಲೇ ಧಾರ್ಮಿಕ ವಿಧಿವಿಧಾನ ಪೂರೈಸಿದರು. ಹಬ್ಬದ ಅಂಗವಾಗಿ ಪ್ರತಿ ವರ್ಷ ಮೆರುಗು ಪಡೆಯುತ್ತಿದ್ದ ಈದ್ಗಾ ಮೈದಾನದಲ್ಲಿ ಸಡಗರವಿರಲಿಲ್ಲ. ಹೊಸ ಬಟ್ಟೆ ಧರಿಸಿ ನೆರೆಹೊರೆಯವರನ್ನು ಆಲಂಗಿಸಿ ಸಂಭ್ರಮಿಸುವ ವಾತಾವರಣ ಸಹ ಕಂಡು ಬರಲಿಲ್ಲ.

ಸೇವಾ ಕಾರ್ಯ: ಹಲವು ಸಂಘ ಸಂಸ್ಥೆಗಳ ಸದಸ್ಯರು ವಿವಿಧ ಸೇವಾ ಕಾರ್ಯದ ಮೂಲಕ ಈದ್ ಮಿಲಾದ್ ಆಚರಿಸಿದರು. ಹಲವು ಮುಸ್ಲಿಮರು ಬಡವರಿಗೆ ಮಾಂಸ ದಾನ ಕೊಡುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಿದರು.

ಹಬ್ಬದ ಅಂಗವಾಗಿ ಮನೆಗಳಲ್ಲಿ ಮಾಂಸದೂಟ ತಯಾರಿಸಲಾಗಿತ್ತು. ಎಲ್ಲೆಲ್ಲೂ ಬಿರಿಯಾನಿ, ಕುಷ್ಕಾ, ಕಬಾಬ್‌, ರೋಟಿ ಮಾಂಸದ ಘಮಲು ಹರಡಿತ್ತು. ಮಾಂಸದ ಅಂಗಡಿಗಳ ಬಳಿ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಪ್ರಾರ್ಥನೆ ಬಳಿಕ ಕುಟುಂಬ ಸದಸ್ಯರೆಲ್ಲಾ ಒಟ್ಟಾಗಿ ಹಬ್ಬದೂಟ ಸವಿದರು.

ಪೊಲೀಸ್‌ ಬಂದೋಬಸ್ತ್: ಹಬ್ಬದ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದವರ ಅಂಗಡಿಗಳು ಮುಚ್ಚಿದ್ದವು. ಆಟೊ ಸಂಚಾರ ವಿರಳವಾಗಿತ್ತು. ಬಸ್‌ ನಿಲ್ದಾಣ ಹಾಗೂ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ದರ್ಗಾಗಳು, ಮುಸ್ಲಿಂ ಜನವಸತಿ ಇರುವ ಬಡಾವಣೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.