ADVERTISEMENT

ಕೋಲಾರ: ಜಿಲ್ಲೆಯ 3 ನಗರಸಭೆಗೆ ಚುನಾವಣೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 15:25 IST
Last Updated 20 ಅಕ್ಟೋಬರ್ 2019, 15:25 IST

ಕೋಲಾರ: ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ 3 ನಗರಸಭೆಯ ಚುನಾವಣಾ ದಿನಾಂಕ ಘೋಷಿಸಿದ್ದು, ಭಾನುವಾರದಿಂದಲೇ (ಅ.20) ಚುನಾವಣಾ ನೀತಿಸಂಹಿತೆ ಜಾರಿಯಾಗಿದೆ.

ಕೋಲಾರ ಹಾಗೂ ರಾಬರ್ಟ್‌ಸನ್‌ಪೇಟೆ (ಕೆಜಿಎಫ್‌) ನಗರಸಭೆಯ ತಲಾ 35 ವಾರ್ಡ್ ಮತ್ತು ಮುಳಬಾಗಿಲು ನಗರಸಭೆಯ 31 ವಾರ್ಡ್‌ಗಳಿಗೆ ನ.12ರಂದು ಚುನಾವಣೆ ನಡೆಯಲಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಯು ಗುರುವಾರ (ಅ.24) ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.

ನಾಮ ಪತ್ರ ಸಲ್ಲಿಕೆಗೆ ಅ.31 ಕಡೆಯ ದಿನವಾಗಿದ್ದು, ನ.2ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ.4 ಕಡೆಯ ದಿನ. ನ12.ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನ.14ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದೇ ದಿನ ಸಂಜೆ ಚುನಾವಣಾ ನೀತಿಸಂಹಿತೆ ಅಂತ್ಯಗೊಳ್ಳುತ್ತದೆ.

ADVERTISEMENT

ಮೂರೂ ನಗರಸಭೆಗಳ ಚುನಾಯಿತ ಆಡಳಿತ ಮಂಡಳಿಯ ಅಧಿಕಾರಾವಧಿ ಮಾರ್ಚ್‌ನಲ್ಲೇ ಮುಗಿದಿತ್ತು. ಕೋಲಾರ, ಮುಳಬಾಗಿಲು ಮತ್ತು ರಾಬರ್ಟ್‌ಸನ್‌ಪೇಟೆ ನಗರಸಭೆ ವ್ಯಾಪ್ತಿಯ ವಾರ್ಡ್‌ವಾರು ಮೀಸಲಾತಿ ಹಾಗೂ ವಾರ್ಡ್‌ ಪುನರ್‌ ವಿಂಗಡಣೆ ಸಂಬಂಧ ಕೆಲವರು ಹೈಕೋರ್ಟ್‌ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಈ ಕಾರಣದಿಂದಾಗಿ ಆಯೋಗವು ಮೂರೂ ನಗರಸಭೆಗಳನ್ನು ಹೊರತುಪಡಿಸಿ ಬಂಗಾರಪೇಟೆ, ಶ್ರೀನಿವಾಸಪುರ ಮತ್ತು ಮಾಲೂರು ಪುರಸಭೆಗೆ ಮೇ ತಿಂಗಳಲ್ಲಿ ಚುನಾವಣೆ ನಡೆಸಿತ್ತು.

ಆಕ್ಷೇಪಣಾ ಅರ್ಜಿ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಸರ್ಕಾರ ಮೂರೂ ನಗರಸಭೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿತ್ತು. ಇದೀಗ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಿದ್ದು, ಆಯೋಗವು ಚುನಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.