ADVERTISEMENT

ಮಹಿಳಾ ಸ್ವಸಹಾಯ ಸಂಘ ಸ್ಥಾಪನೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 8:16 IST
Last Updated 3 ಮಾರ್ಚ್ 2021, 8:16 IST
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರ ತಾಲ್ಲೂಕಿನ ಇರಗಸಂದ್ರ ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರ ತಾಲ್ಲೂಕಿನ ಇರಗಸಂದ್ರ ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.   

ಕೋಲಾರ: ‘ಮಹಿಳಾ ಸ್ವಸಹಾಯ ಸಹಕಾರ ಸಂಘಗಳ ಸಿಬ್ಬಂದಿ ಪ್ರಾಮಾಣಿಕವಾಗಿ ಪಾರದರ್ಶಕತೆಯಿಂದ ಕೆಲಸ ನಿರ್ವಹಿಸುತ್ತಿದ್ದು, ಸಂಘಗಳು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿವೆ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಇರಗಸಂದ್ರ ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ‘ತಾಲ್ಲೂಕಿನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುತ್ತೇವೆ’ ಎಂದು ತಿಳಿಸಿದರು.

‘ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾಲಿನ ಸಂಘಗಳಿವೆ. ತಾಲ್ಲೂಕಿನಲ್ಲಿ ಹೆಚ್ಚು ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಿ ಕಲಬೆರೆಕೆ ಇಲ್ಲದ ಶುದ್ಧ ಮತ್ತು ಗುಣಮಟ್ಟದ ಹಾಲು ಶೇಖರಣೆಗೆ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಒಕ್ಕೂಟದ ವಿವಿಧ ಯೋಜನೆಗಳ ಮೂಲಕ ಸಂಘಗಳ ಬಲವರ್ಧನೆಗೆ ಶ್ರಮಿಸುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

‘ಇರಗಸಂದ್ರ ಹಾಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಕೋಚಿಮುಲ್‌ ಮತ್ತು ಕೆಎಂಎಫ್‌ನಿಂದ ₹ 7 ಲಕ್ಷ ಕಟ್ಟಡ ಅನುದಾನ, ₹ 3.50 ಲಕ್ಷ ವೆಚ್ಚದ ಸಮೂಹ ಹಾಲು ಕರೆಯುವ ಯಂತ್ರಗಳು ಹಾಗೂ ₹ 1.50 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಕೊಡುತ್ತೇವೆ’ ಎಂದು ಹೇಳಿದರು.

‘ಬಿಎಂಸಿ ಘಟಕ ಸ್ಥಾಪನೆಯಿಂದ ಹಾಲಿನ ಗುಣಮಟ್ಟದ ಜತೆಗೆ ಜೈವಿಕ ಗುಣಮಟ್ಟ ಕಾಪಾಡಲು ಸಹಾಯವಾಗುತ್ತದೆ. ಒಕ್ಕೂಟದ ತುರ್ತು ಕರೆ, ಗುಂಪು ವಿಮೆ ಯೋಜನೆ, ವಿಮಾ ಯೋಜನೆ, ಲಸಿಕೆ ಕಾರ್ಯಕ್ರಮ, ಪಶು ಆಹಾರ ಖನಿಜ ಮಿಶ್ರಣ ಪಡೆಯಬೇಕು’ ಎಂದು ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಸಲಹೆ ನೀಡಿದರು.

ಸಂಘದ ಅಧ್ಯಕ್ಷೆ ಈಶ್ವರಮ್ಮ, ಗ್ರಾಮದ ಮುಖಂಡರಾದ ನಾರಾಯಣಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್ ಹಾಗೂ ಗ್ರಾಮಸ್ಥರು, ಹಾಲು ಉತ್ಪಾದಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.