ADVERTISEMENT

ನೌಕರರ ಭವನ ನವೀಕರಣ: ಅಂದಾಜುಪಟ್ಟಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 13:48 IST
Last Updated 31 ಜುಲೈ 2021, 13:48 IST
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿದರು
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿದರು   

ಕೋಲಾರ: ‘ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಜಿಲ್ಲಾ ನೌಕರರ ಭವನದ ನವೀಕರಣಕ್ಕೆ ಆರ್ಥಿಕ ನೆರವು ನೀಡಲು ಒಪ್ಪಿರುವ ಹಿನ್ನೆಲೆಯಲ್ಲಿ ಕಾಮಗಾರಿಯ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಷಡಕ್ಷರಿ ಜಿಲ್ಲಾ ನೌಕರರ ಭವನ ವೀಕ್ಷಿಸಿದ್ದು, ಭವನದ ನವೀಕರಣಕ್ಕೆ ಅನುದಾನ ಒದಗಿಸಲು ಒಪ್ಪಿದ್ದಾರೆ. ರಾಜ್ಯ ಸಂಘ ನೀಡುವ ಅನುದಾನ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಪಡೆದು ಸುಂದರ ಭವನ ನಿರ್ಮಾಣ ಮಾಡಲಾಗುತ್ತದೆ’ ಎಂದರು.

‘ಇನ್ನು ಮುಂದೆ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಸಂಘದಿಂದ ಆಯಾ ತಿಂಗಳು ನಿವೃತ್ತರಾದ ನೌಕರರ ಸೇವೆ ಸ್ಮರಿಸುವ ಮೂಲಕ ಸನ್ಮಾನಿಸಿ ಬೀಳ್ಕೊಡುವ ಸಂಪ್ರದಾಯ ಆರಂಭಿಸಬೇಕು. ಆಯಾ ತಾಲ್ಲೂಕಿನಲ್ಲಿ ನಿವೃತ್ತರಾಗುವ ನೌಕರರನ್ನು ತಾಲ್ಲೂಕು ಸಂಘದಿಂದ ಮತ್ತು ಜಿಲ್ಲಾ ಕೇಂದ್ರದಲ್ಲಿ ನಿವೃತ್ತರಾಗುವ ನೌಕರರನ್ನು ಜಿಲ್ಲಾ ಸಂಘದಿಂದ ಸನ್ಮಾನಿಸಿ ಬೀಳ್ಕೊಡಬೇಕು’ ಎಂದು ಸೂಚಿಸಿದರು.

ADVERTISEMENT

‘ಎಲ್ಲಾ ಇಲಾಖೆಗಳ ನೌಕರರ ಸಮಸ್ಯೆ ಆಲಿಸಲು ಶೀಘ್ರ ಜಂಟಿ ಸಮಾಲೋಚನಾ ಸಮಿತಿ ಸಭೆ ಕರೆಯಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತದೆ. ಆಯಾ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ತಮ್ಮ ಇಲಾಖೆಯಲ್ಲಿನ ನೌಕರರ ಸಮಸ್ಯೆಗಳನ್ನು ಪಟ್ಟಿ ಮಾಡಿ ಜಿಲ್ಲಾ ಅಧ್ಯಕ್ಷರಿಗೆ ನೀಡಬೇಕು’ ಎಂದು ತಿಳಿಸಿದರು.

ನೌಕರರ ಸಮಸ್ಯೆಗಳಿಗೆ ಜಿಲ್ಲಾ ಸಂಘ ಸ್ಪಂದಿಸಲು ಅನುವಾಗುವಂತೆ ವಾರಕ್ಕೊಂದು ಇಲಾಖೆಯ ನೌಕರರ ಸಮಸ್ಯೆಗಳ ಕುರಿತು ತಾಲ್ಲೂಕುವಾರು ಹಾಗೂ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ನೇಮಕಾತಿ ಪ್ರಕ್ರಿಯೆ: ಜಿಲ್ಲಾ ನೌಕರರ ಭವನಕ್ಕೆ 5 ಎಕರೆ ಜಮೀನು ಮಂಜೂರಾತಿಗಾಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಈ ಕಾರ್ಯ ತ್ವರಿತ ಗತಿಯಲ್ಲಿ ಸಾಗಲು ಕ್ರಮ ವಹಿಸಬೇಕು. ನೌಕರರ ಸಂಘದ ಪದಾಧಿಕಾರಿಗಳ ಹುದ್ದೆಗಳಿಗೆ ಅರ್ಹ ನೌಕರರನ್ನು ನಾಮನಿರ್ದೇಶನ ಮಾಡಲು ಅಧ್ಯಕ್ಷರಿಗೆ ಕಾರ್ಯಕಾರಿ ಸಮಿತಿ ಅಧಿಕಾರ ನೀಡಿದ್ದು, ಶೀಘ್ರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಣಯ ಅಂಗೀಕರಿಸಲಾಯಿತು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಗೌತಮ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಅಜಯ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.